ADVERTISEMENT

ರಸಗೊಬ್ಬರ ಕೊರತೆ: ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 6:15 IST
Last Updated 3 ಅಕ್ಟೋಬರ್ 2012, 6:15 IST
ರಸಗೊಬ್ಬರ ಕೊರತೆ: ರೈತರ ಪರದಾಟ
ರಸಗೊಬ್ಬರ ಕೊರತೆ: ರೈತರ ಪರದಾಟ   

ಅರಸೀಕೆರೆ: ರಸಗೊಬ್ಬರ ದೊರೆಯದಿರುವುದನ್ನು ಖಂಡಿಸಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ರೈತರು ಸೋಮವಾರ ಪ್ರತಿಭಟಿಸಿದರು.

ತಾಲ್ಲೂಕಿನಾದ್ಯಂತ ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ರಸಗೊಬ್ಬರ ಅವಶ್ಯವಾಗಿದ್ದರಿಂದ, ಮುಂಜಾನೆಯಿಂದಲೇ ರೈತರು ರಸಗೊಬ್ಬರ ಖರೀದಿಸಲು ವ್ಯವಸಾಯೋತ್ಪನ್ನ ಸಂಘದ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ ಮಧ್ಯಾಹ್ನವಾದರೂ ರಸಗೊಬ್ಬರ ದೊರೆಯದೇ ಇದ್ದುದ್ದರಿಂದ ಆಕ್ರೋಶಗೊಂಡ ರೈತರು ಮೊದಲು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದರು.

ಸುದ್ದಿ ತಿಳಿದು, ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಟಿಎಪಿಸಿಎಂಎಸ್ ಕಾರ್ಯದರ್ಶಿ ತಿಮ್ಮೇಗೌಡ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕೂಡಲೇ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರೈತ ಸಂಘದ ಮುಖಂಡ ಬೋರನಕೊಪ್ಪಲು ಜಯರಾಮ್ ಮಾತನಾಡಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ತಿಮ್ಮೇಗೌಡ ಖಾಸಗಿ ರಸಗೊಬ್ಬರದ ಅಂಗಡಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ದುರುದ್ದೇಶದಿಂದ ರಸಗೊಬ್ಬರ ತರಿಸದೇ ವಿಳಂಬ ಮಾಡುತ್ತಿದ್ದಾರೆ. ರೈತರು ಖಾಸಗಿ ಅಂಗಡಿಗಳಿಗೆ  ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಪುರಸಭಾ ಅಧ್ಯಕ್ಷ ಜಿ.ಟಿ. ಗಣೇಶ್, ತಾ.ಪಂ ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ, ಯಳವಾರೆ ಕೇಶವಮೂರ್ತಿ ಮುಂತಾದವರು  ಇದ್ದರು.

ರೈತರ ನೂಕುನುಗ್ಗಲು

ಜಾವಗಲ್: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಸೋಮವಾರ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ನೂಕು ನುಗ್ಗಲಿನಲ್ಲಿ ಗಂಟೆಗಟ್ಟಲೆ ಕಾಯುವ ದೃಶ್ಯ ಎದ್ದು ಕಾಣುತ್ತಿತ್ತು.

 ಕೇವಲ 12 ಟನ್ (240 ಚೀಲ) ಯೂರಿಯಾ ಬಂದಿದೆ. 600 ಕ್ಕೂ ಹೆಚ್ಚು ರೈತರು ಸಾಲಿನಲ್ಲಿ ನಿಂತಿದ್ದು, ಕೇವಲ 240 ಮಂದಿಗೆ ಮಾತ್ರ ಯೂರಿಯಾ ಸಿಕ್ಕಿದ್ದು, ಉಳಿದ ರೈತರಿಗೆ ಗೊಬ್ಬರ ಸಿಗದೆ ಆಕ್ರೋಶ           ವ್ಯಕ್ತಪಡಿಸಿದರು.

 ಕಳೆದ 3 ದಿನಗಳಿಂದ ಜಾವಗಲ್‌ನಲ್ಲಿ  ಅಲ್ಪ ಮಳೆಯಾಗಿದ್ದು, ಯೂರಿಯಾಕ್ಕೆ  ತುಂಬಾ ಬೇಡಿಕೆ ಇದೆ. ಹೆಚ್ಚು ಪ್ರಮಾಣದ ಯೂರಿಯಾ ಪೂರೈಸುವಂತೆ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.