ADVERTISEMENT

ರಸದೌತಣ ನೀಡಿದ ‘ಗ್ರಾಮೀಣ ಕಲರವ’

ಹೆಚ್ಚು ಬಹುಮಾನ ಗೆದ್ದುಕೊಂಡ ಗ್ರಾಮೀಣ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 8:58 IST
Last Updated 5 ಏಪ್ರಿಲ್ 2018, 8:58 IST
ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಾಮೀಣ ಕಲರವದಲ್ಲಿ ನೀರು ಹೊರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ಸೊಂಟ ಹಾಗೂ ತಲೆಯ ಮೇಲೆ ನೀರಿನ ಬಿಂದಿಗೆ ಹೊತ್ತು ಓಡಿದರು.
ಹಾಸನ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಾಮೀಣ ಕಲರವದಲ್ಲಿ ನೀರು ಹೊರುವ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ಸೊಂಟ ಹಾಗೂ ತಲೆಯ ಮೇಲೆ ನೀರಿನ ಬಿಂದಿಗೆ ಹೊತ್ತು ಓಡಿದರು.   

ಹಾಸನ: ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಸಂದರ್ಭದಲ್ಲಿ ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಗ್ರಾಮೀಣ ಕ್ರೀಡೆಗಳನ್ನು ನಡೆಸುವ ಮೂಲಕ ತಾವು ಎಲ್ಲದಕ್ಕೂ ಸೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಬುಧವಾರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಗ್ರಾಮೀಣ ಕಲರವ ಕಾರ್ಯಕ್ರಮ ರಸದೌತಣ ನೀಡಿತು.ಗ್ರಾಮೀಣ ಕ್ರೀಡೆಗಳೆಂದರೇ ಯಾರಿಗೆ ತಾನೇ ಇಷ್ಟವಾಗೋದಿಲ್ಲ. ವರ್ಷವಿಡಿ ಪಾಠ ಪ್ರವಚನಗಳಲ್ಲಿ ತೊಡಗಿಕೊಂಡಿದ್ದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡಾಕೂಟವು ಮತ್ತೆ ಗ್ರಾಮೀಣ ಕ್ರೀಡೆಯತ್ತ ಮುಖ ಮಾಡುವಂತೆ ಮಾಡಿತು.

ಕಾಲೇಜಿನ ಕಾರ್ಯಕ್ರಮ ಸಂಯೋಜಕರು ಮೊದಲಿಗೆ ನಡೆಸಿದ ಲಿಂಬು ಚಮಚ ಓಟದ ಸ್ಪರ್ಧೆಗೆ ವಿದ್ಯಾರ್ಥಿನಿಯರು ಮುಗಿಬಿದ್ದರು. ಕಾಲೇಜಿಗೆ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಬರುವುದರಿಂದ ಆಯೋಜಕರು ವಿದ್ಯಾರ್ಥಿಗಳಿಗಾಗಿ ನೀರು ಹೊರುವ ಸ್ಪರ್ಧೆ ಆಯೋಜಿಸಿದ್ದರು. ತಲೆಮೇಲೆ ಹಾಗೂ ಸೊಂಟದ ಮೇಲೆ ಬಿಂದಿಗೆ ಹೊತ್ತು ವಿದ್ಯಾರ್ಥಿಗಳು ಸರಸರನೆ ಓಡಿದರು. ಬಹುತೇಕ ಹಳ್ಳಿಯಿಂದ ಬಂದವರೇ   ಬಹುಮಾನ ಗಿಟ್ಟಿಸಿಕೊಂಡರು.ಮಡಕೆ ಒಡೆಯುವುದು, ಸ್ಥಳದಲ್ಲೇ ಅಡುಗೆ ತಯಾರಿಸುವುದು, ಸೂಜಿಗೆ ದಾರ ಪೋಣಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರು ರಂಗೋಲಿ ಸ್ಪರ್ಧೆಯಲ್ಲೂ ಭಾಗವಹಿಸಿ ತಮ್ಮ ಕಲ್ಪನೆಗೆ ಬಂದ ಬಣ್ಣಬಣ್ಣದ ಆಕರ್ಷಕ ರಂಗೋಲಿಯನ್ನು ಬಿಡಿಸಿ ಕಾಲೇಜು ಆವರಣ ಕಂಗೊಳಿಸುವಂತೆ ಮಾಡಿದರು. ವಿವಿಧ ಬಗೆಯ ಬಣ್ಣ ತುಂಬಿ ಒಂದು ಆಕೃತಿಯನ್ನು ನೀಡುತ್ತಿದ್ದರೆ, ನೋಡಲು ಎರಡು ಕಣ್ಣುಗಳು ಸಾಲದೆಂಬಂತೆ ಬಿಂಬಿಸುತ್ತಿತ್ತು.ಕುಂಟೆಬಿಲ್ಲೆ ಸ್ಪರ್ಧೆ ವಿದ್ಯಾರ್ಥಿನಿಯರು ಆಸಕ್ತಿಯಿಂದ ಭಾಗವಹಿಸಿದರು. ಬಾಲ್ಯದ ಆಟವನ್ನು ಆಡಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದರು. ಕುಂಟೆಬಿಲ್ಲೆ ಆಡಿದ ವಿದ್ಯಾರ್ಥಿನಿಯರು ತಮ್ಮ ಬಾಲ್ಯದ ನೆನಪುಗಳನ್ನು ನೆನದು ಸಂತಸಪಟ್ಟರು. ತಮ್ಮ ಬಾಲ್ಯದ ನೆನಪುಗಳನ್ನು ಕಣ್ಮುಂದೆ ತಂದದ್ದಕ್ಕೆ ಕಾಲೇಜಿಗೆ ಥ್ಯಾಂಕ್ಸ್ ಹೇಳಿ ಖುಷಿಪಟ್ಟರು.

ಇನ್ನೂ ಮೂರು ಕಾಲಿನ ಓಟವಂತೂ ಮೈ ಜುಮ್ಮೆನ್ನುವಂತಿತ್ತು, ಇಬ್ಬರು ವಿದ್ಯಾರ್ಥಿನಿರು ತಮ್ಮ ಒಂದೊಂದು ಕಾಲನ್ನು ಸೇರಿಸಿ ಕಟ್ಟಿಕೊಂಡು ಒಟ್ಟಿಗೆ ಓಡುವುದನ್ನು ನೋಡಿ ಇತರರು ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ಇದೇ ತರನಾಗಿದ್ದ ಮತ್ತೊಂದು ಆಟವೆಂದರೇ ಗೋಣಿ ಚೀಲದ ಓಟದ ಸ್ಪರ್ಧೆ, ಚೀಲದಲ್ಲಿ ಕಪ್ಪೆಯ ರೀತಿ ಕುಪ್ಪಳಿಸುತ್ತಾ ಓಡುತ್ತಿದ್ದ ರೀತಿ ಎಲ್ಲರಲ್ಲೂ ನಗು ಹುಟ್ಟಿಸಿತು. ಕೆಲವು ವಿದ್ಯಾರ್ಥಿನಿಯರು ಜಾಣ್ಮೆಯಿಂದ ಆಟವಾಡಿ ಬಹುಮಾನ ಪಡೆದರು. ಒಟ್ಟಿನಲ್ಲಿ ಕಾಲೇಜಿನಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದಿಂದ ವಿದ್ಯಾರ್ಥಿಗಳು ಭಾಗವಹಿಸಿ ಸಂತಸ ಪಟ್ಟರು.

ADVERTISEMENT

ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಿದೆ: ‘ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಿಸುವ ನಿಟ್ಟಿನಲ್ಲಿ ಗ್ರಾಮೀಣ ಕಲರವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನ ವಿದ್ಯಾರ್ಥಿಗಳು ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಹೀಗಾಗಿ ಅವುಗಳನ್ನು ತಿಳಿಸಿಕೊಡುವ ಹಾಗೂ ಉಳಿಸಿ ಬೆಳೆಸುವ ಕೆಲಸವನ್ನು ಕಾಲೇಜು ವತಿಯಿಂದ ಮಾಡಲಾಗುತ್ತಿದೆ. ಎಂದು ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಹೇಳಿದರು.

ಬಿರಿಯಾನಿ, ಪಾನಿಪುರಿ ಮಾರಾಟ ಮಾಡಿ ಖುಷಿಪಟ್ಟ ವಿದ್ಯಾರ್ಥಿನಿಯರು

ಕಾಲೇಜಿನಲ್ಲಿ ಗ್ರಾಮೀಣ ಕಲರವದ ಜತೆಗೆ ಕ್ಯಾಂಟೀನ್ ಡೇ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ ಮಾರಾಟ ಮಾಡಿದರು. ಬಿರಿಯಾನಿ, ಕಬಾಬ್, ಪಲಾವ್, ಗೋಬಿ ಮಂಚೂರಿ, ಪಾನಿಪುರಿ, ತಂಪು ಪಾನೀಯ ಸೇರಿದಂತೆ ನಾನಾ ತಿನಿಸುಗಳನ್ನು ಸಿದ್ಧದಪಡಿಸಿ ಮಾರಾಟ ಮಾಡಿ ಮೆಚ್ಚುಗೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.