ADVERTISEMENT

ರಸ್ತೆ ಡಾಂಬರೀಕರಣಕ್ಕೆ ರೈತಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 5:27 IST
Last Updated 21 ಸೆಪ್ಟೆಂಬರ್ 2013, 5:27 IST

ಅರಸೀಕೆರೆ:  ತಾಲ್ಲೂಕಿನ ಕಣಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಾಗೇನಹಳ್ಳಿ ಗ್ರಾಮಕ್ಕೆ ಹೋಗ­ಬೇಕಾದ ರಸ್ತೆಯನ್ನು ಡಾಂಬರೀಕರಣ­ಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಹಸಿರು ಸೇನೆ, ರಾಜ್ಯ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗುರುವಾರ ಕಣಕಟ್ಟೆ ಗ್ರಾಮದ ಮುಂಭಾಗ ಬಾಣಾ ವರ-ಪಂಚನಹಳ್ಳಿ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್, ಜಿಲ್ಲಾ ರೈತ ಸಂಘದ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಹೋಬಳಿ ರೈತ ಸಂಘದ ಮಾಗೇನಹಳ್ಳಿ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಿಗಳು ರಸ್ತೆ ದುರಸ್ತಿಪಡಿಸದೆ ಬಿಡುಗಡೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಸ್ಥಗಿತಗೊಂಡಿದೆ. ಆದ್ದರಿಂದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಮಹದೇವಪ್ಪ ಸ್ಥಳಕ್ಕೆ ಆಗಮಿಸಿ, ಇನ್ನು 15 ದಿನದೊಳಗಾಗಿ ರಸ್ತೆ ಡಾಂಬರೀಕರಣ ಮಾಡುವುದಾಗಿ ಅವರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ಬೋರನಕೊಪ್ಪಲು ಶಿವ­ಲಿಂಗಪ್ಪ, ಅಣ್ಣಾಯಕನಹಳ್ಳಿ ಶಿವ­ಮೂರ್ತಿ, ರೈತ ಸಂಘದ ಗೌರವಾಧ್ಯಕ್ಷ ಜವನಹಳ್ಳಿ ನಿಂಗಪ್ಪ ಕರಗುಂದ ಶಿವಲಿಂಗಪ್ಪ, ಗೀಜೀಹಳ್ಳಿ ಪ್ರಸಾದ್, ಮಾಗೇನಹಳ್ಳಿ ಶಿವಕುಮಾರ್, ಪಾಲಾ­ಕ್ಷ­ಮೂರ್ತಿ, ಎಂ.ಎಸ್. ಪರ­ಮೇಶ್ವರಪ್ಪ, ಗೋ.ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.