ADVERTISEMENT

ರಾಮನವಮಿ: ವಿಶೇಷ ಪೂಜೆ, ಪಾನಕ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:00 IST
Last Updated 20 ಏಪ್ರಿಲ್ 2013, 10:00 IST

ಹಾಸನ: ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ಭಕ್ತಿ ಭಾವಗಳಿಂದ ರಾಮನವಮಿ ಉತ್ಸವ ಆಚರಿಸಲಾಯಿತು.

ನಗರದ ಅನೇಕ ರಾಮ ಮಂದಿರಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ- ಪುನಸ್ಕಾರಗಳು ನಡೆದವು. ಭಕ್ತರು ದೇವರ ದರುಶನಕ್ಕೆ ಸಾಲುಗಟ್ಟಿ ನಿಂತಿದ್ದರು.

ವಿವಿಧ ಸಂಘಟನೆಗಳವರು ರಸ್ತೆ ಬದಿಯಲ್ಲಿ ಶಾಮಿಯಾನ ಹಾಕಿ, ಜನರು, ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸಿದರು.

ರಾಮನವಮಿ ಅಂಗವಾಗಿ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ    ವಿಶೇಷ ಪೂಜೆ, ಹೋಮ-   ಹವನಗಳು ನಡೆದವು. ದೇವಸ್ಥಾನಕ್ಕೆ ಬಂದಿದ್ದ ನೂರಾರು ಭಕ್ತರು ದೇವಾಲಯದಲ್ಲಿ ಭಜನೆ, ರಾಮ ಸ್ಮರಣೆ ಮಾಡಿದರು.

ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆ ಬಳಿ ಬೆಲ್ಲದ ಪಾನಕ ಹಾಗೂ ಮಜ್ಜಿಗೆ ವಿತರಿಸಿದರು.

ರಾಮೇಶ್ವರ ಸ್ವಾಮಿ ತೇರು
ಅರಸೀಕೆರೆ ವರದಿ: ತಾಲ್ಲೂಕಿನ ಪುಣ್ಯಕ್ಷೇತ್ರ ಹೊಳಲ್ಕೆರೆಯಲ್ಲಿ ಪ್ರಸನ್ನ ರಾಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ವಾರದ ಹಿಂದೆ, ಪಂಚಮಿಯಂದು ಗ್ರಾಮದಲ್ಲಿ ಪ್ರಸನ್ನ ರಾಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರತಿನಿತ್ಯ ದೇವರಿಗೆ ವಿಶೇಷ ಪೂಜೆ ನಡೆದಿತ್ತು. ರಥೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಜಾತ್ರೆಯ ಅಂಗವಾಗಿ ಶುಕ್ರವಾರ ಮುಂಜಾನೆಯಿಂದಲೇ ಶಾಸ್ತ್ರೋಕ್ತ ವಾಗಿ ಹೋಮ ಬಲಿ ವಿಧಿಗಳನ್ನು ನೆರವೇರಿಸಲಾಯಿತು.

ದೇವಸ್ಥಾನ ಮುಂಭಾಗ ಬಣ್ಣ ಬಣ್ಣದ ಬಟ್ಟೆ ಮತ್ತು ಹೂವಿನಿಂದ ಅಲಂಕರಿಸ ಲಾಗಿದ್ದ ರಥಕ್ಕೆ ಮುಕ್ಕಣ್ಣೇಶ್ವರಿ ದೇವಿ ಸಮ್ಮುಖದಲ್ಲಿ ಪ್ರಸನ್ನ ರಾಮೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಮುಕ್ಕಣ್ಣೇಶ್ವರಿ ದೇವಿ ರಥದ ಗಾಲಿಗೆ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಭಕ್ತರು ರಥದ ಹಗ್ಗ ಹಿಡಿದು ರಾಮೇಶ್ವರ ಸ್ವಾಮಿಗೆ ಜಯಘೋಷ ಹಾಕುತ್ತಾ ತೇರನ್ನು ಎಳೆದರು.

ಭಕ್ತರು ರಥದ ಕಲಶಕ್ಕೆ ಬಾಳೆಹಣ್ಣು, ಉತ್ತತ್ತಿ ದವನ ತೂರಿದರು. ಡಿ.ಎಂಕುರ್ಕೆ, ಮಾಡಾಳು, ಕೊಪ್ಪಲು, ಡಿ.ಆರ್.ಜಿಕೊಪ್ಪಲು, ಹರಳಕಟ್ಟ, ರಾಂಪುರ, ಶಶಿವಾಳ, ಚಿಕ್ಕಮೇಟಿಕುರ್ಕೆ, ಹಿರೀಸಾದರಹಳ್ಳಿ, ಸೊಪ್ಪಿನಹಳ್ಳಿ, ನಾಗವೇದಿ ದೊಡ್ಡಘಟ್ಟ, ಜೆ.ಸಿಪುರ ಹಾಗೂ ವಿವಿಧೆಡೆಯಿಂದ ಭಕ್ತರು ರಥೋತ್ಸವಕ್ಕೆ ಬಂದಿದ್ದರು.

ಹನುಮ ಸ್ಮರಣೆ
ಬಾಣಾವರ ವರದಿ:  ಪಟ್ಟಣದ ಕೋಟೆ ಬಡಾವಣೆ ಮತ್ತು ಪೇಟೆಯ ಎನ್. ಹೆಚ್.206 ರಸ್ತೆ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹನುಮ ಜಯಂತಿ ನಡೆಯಿತು. ಹನುಮ ಜಯಂತಿ ಪ್ರಯುಕ್ತ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಿ ಭಕ್ತರಿಗೆ ಪಾನಕ ಮತ್ತು ಕೊಸಂಬರಿಯನ್ನು ಹಂಚಲಾಯಿತು.

ಸಡಗರದ ಆಂಜನೇಯ ಸ್ವಾಮಿ ಉತ್ಸವ
ಚನ್ನರಾಯಪಟ್ಟಣ ವರದಿ: ಪಟ್ಟಣದಲ್ಲಿ ರಾಮನವಮಿ ಅಂಗವಾಗಿ ವೀರಾಂಜನೇಯ ಸ್ವಾಮಿಯ ಉತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ವೀರಾಂಜನೇಯಸ್ವಾಮಿ ಮೂರ್ತಿ ಯನ್ನು ಬುಧವಾರ ರಾಮನಾಥಪುರಕ್ಕೆ ಕೊಂಡೊಯ್ದು ವಿಶೇಷ ಪೂಜೆ ನೆರವೇರಿಸಿ ತರಲಾಯಿತು. ಗುರುವಾರ ಬೆಳಿಗ್ಗೆ ಮಹಾಗಣಪತಿ ಪೂಜೆ, ಪುಣ್ಯಾಹ ನವಗ್ರಹ ಕಳಸಸ್ಥಾಪನೆ, ಮೂಲದೇವರಿಗೆ ಅಭಿಷೇಕ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಆಂಜನೇಯ ಮೂಲಮಂತ್ರ ಪೂಜೆ ನೆರವೇರಿಸಲಾಯಿತು. ಶುಕ್ರವಾರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಲಂಕೃತ ವಾಹನದಲ್ಲಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ ಜಾನಪದ ಕಲಾತಂಡಗಳೋಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ               ಮೆರವಣಿಗೆ ನಡೆಸಲಾಯಿತು.   ವೀರಾಂಜನೇಯಸ್ವಾಮಿ ಸೇವಾ ಸಮಿತಿಯ   ಪದಾಧಿಕಾರಿಗಳು ಭಾಗವಹಿಸಿದ್ದರು.

ರಾಮನಾಮ ಸ್ಮರಣೆ
ಜಾವಗಲ್ ವರದಿ:  ಪಟ್ಟಣದ ವಿವಿಧೆಡೆ ರಾಮನವಮಿಯನ್ನು ಶುಕ್ರವಾರ ಸಂಭ್ರಮದಿಂದ ಅಚರಿಸಲಾಯಿತು. ಬ್ರಾಹ್ಮಣ ಮಹಾ ಸಭಾ, ದೇವಾಂಗ ಸಮಾಜದ ವತಿಯಿಂದ ಪಟ್ಟಣದಲ್ಲಿ ಸೀತಾರಾಮ ಭಾವಚಿತ್ರದ ಮೆರೆವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ. ಕೊಸಂಬರಿ ವಿತರಿಸಲಾಯಿತು       ಗಂಗಾಮತಸ್ಥ, ಕನಕ ಸಮುದಾಯ, ಪೇಟೆಬೀದಿ ವಿಶ್ವ ಕರ್ಮಸಮಾಜದವರು ರಾಮನವಮಿ ಪ್ರಯಕ್ತ ರಾಮಮಂದಿರದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.