ADVERTISEMENT

ರಾಷ್ಟ್ರೀಯ ಹೆದ್ದಾರಿಗೆ ಗುಂಡಿಗಳ ಅಡ್ಡಿ

ಪ್ರಜಾವಾಣಿ ವಿಶೇಷ
Published 12 ಸೆಪ್ಟೆಂಬರ್ 2013, 6:53 IST
Last Updated 12 ಸೆಪ್ಟೆಂಬರ್ 2013, 6:53 IST

ಹಳೇಬೀಡು: ಈ ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರು. ರಸ್ತೆ ಬದಿಯಲ್ಲಿ ಅಲ್ಲಲ್ಲಿ ಮಣ್ಣಿನ ರಾಶಿ. ಬೈಕ್‌ ಸವಾರರು ಎಚ್ಚರ ತಪ್ಪಿದರೆ ಕೈಕಾಲು ಜಖಂ. ದೊಡ್ಡ ವಾಹನಗಳು ಚಾಲಕನ ನಿಯಂತ್ರಣ ತಪ್ಪಿದರೆ ಪ್ರಯಾಣಿಕರಿಗೆ ಸಾವು ನೋವು ತಪ್ಪಿದ್ದಲ್ಲ.

ಇದು ಸಾಮಾನ್ಯ ರಸ್ತೆಯ ಕಥೆಯಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗುತ್ತಿರುವ, ಪ್ರತಿದಿನ ನೂರಾರು ಪ್ರವಾಸಿಗರು ಓಡಾಡುವ ಬೇಲೂರು ಬಾಣಾವರ ರಸ್ತೆಯ ಗೋಳಿನ ಕಥೆ.

ಚರಂಡಿಯ ಮಣ್ಣು ತೆಗೆದು ಹಾಗೆಯೇ ಬಿಡಲಾಗಿರುವುದರಿಂದ ಮನೆ ಹಾಗೂ ಅಂಗಡಿಗಳಿಗೆ ದಾರಿ ಇಲ್ಲದೇ ಓಡಾಡಲು ಸರ್ಕಸ್ ಮಾಡುವಂತಾಗಿದೆ. ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಾಗ ತಡವಾಗಿಯಾದರೂ ಗುಂಡಿ ಮುಚ್ಚುತ್ತಿದ್ದವು.

ಈಗ ರಸ್ತೆ ಸ್ಥಿತಿಗತಿ ಕೇಳುವವರೇ ಇಲ್ಲದಂತಾಗಿದೆ. ರಸ್ತೆ ನಿರ್ಮಾಣದ ಗುತ್ತಿಗೆ ಮಾಡಿಕೊಂಡಿರುವ ಕಂಪೆನಿಯವರು ಮತ್ತೊಂದು ಕಂಪೆನಿಗೆ ಮರು ಗುತ್ತಿಗೆ ನೀಡಿದ್ದಾರೆ. ಎರಡೂ ಕಂಪೆನಿಯವರು ಕೆಲಸ ಬಗ್ಗೆ ಆಸಕ್ತಿ ವಹಿಸದೇ ಇರುವುದರಿಂದ ಜನರು ಕಷ್ಟಪಡುವಂತಾಗಿದೆ ಎನ್ನುತ್ತಾರೆ ಬೇಲೂರು ರಸ್ತೆ ನಿವಾಸಿಗಳು.

ಕರಿಯಮ್ಮ ಮಹಾದ್ವಾರ ದ್ವಾರವೃತ್ತದ ಬಳಿ ದೊಡ್ಡ ಗುಂಡಿ ನಿರ್ಮಾಣವಾದರೆ, ಭೂತನಗುಡಿ ವೃತ್ತದ ಬಳಿ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಜನರು ಕೊಚ್ಚೆ ದಾಟಿಕೊಂಡು ಓಡಾಡುವುದಲ್ಲದೆ, ವಾಹನ ಸಂಚರಿಸುವಾಗ ಕೊಚ್ಚೆ ನೀರು ಜನರ ಮೇಲೆ ಚಿಮ್ಮುತ್ತಿದೆ. ಮಳೆ ಬಂದರೆ ರಸ್ತೆ ಕಂಬಳದ ಗದ್ದೆಯಂತಾಗುತ್ತದೆ. ಬಿಸಿಲು ಬಿದ್ದಾಗ ರಸ್ತೆ ಧೂಳುಮಯವಾಗುತ್ತದೆ. ವರ್ಷವಿಡೀ ರಸ್ತೆಯ ಗೋಳು ತಪ್ಪುವುದಿಲ್ಲ. ಇಲ್ಲಿ ಅಪಘಾತ ಸಂಭವಿಸಿದರೆ ವಾಹನಗಳು ಜಖಂ ಆಗುವುದಲ್ಲದೇ ಅಂಗಾಂಗಗಳಿಗೂ ಹೊಡೆತ ಬೀಳುವುದು ಖಂಡಿತ  ಎನ್ನುತ್ತಾರೆ ಆಟೊಚಾಲಕ ರವಿ.

ರಸ್ತೆ ವಿಸ್ತರಣೆ ಆಗುತ್ತಿರುವುದರಿಂದ ರಸ್ತೆ ಬದಿಯ ಹಲವು ಕಟ್ಟಡಗಳನ್ನು ಮಾಲೀಕರೇ ಧ್ವಂಸ ಮಾಡಿದ್ದಾರೆ. ಉಳಿದ ಜಾಗಕ್ಕೆ ಕಟ್ಟಡ ನಿರ್ಮಾಣ ಮಾಡಲು ರಸ್ತೆಯ ಅಳತೆ ಮಾಹಿತಿ ಲಭ್ಯವಾಗದೇ ಇರುವುದರಿಂದ ಕೆಡವಿದ ಕಟ್ಟಡಗಳು ಅಸ್ಥಿ ಪಂಜರದಂತೆ ಕಾಣುತ್ತಿವೆ. ಇಲ್ಲಿಯ ನಿವಾಸಿಗಳಿಗೆ ಈಗ ಹಳೇ ಮನೆಯೂ ಇಲ್ಲದೇ ಹೊಸದಾಗಿ ಮನೆ ನಿರ್ಮಾಣ ಮಾಡುವುದಕ್ಕೂ ಅವಕಾಶ ಇಲ್ಲದಂತಾಗಿದೆ.

ರಾಷ್ಟ್ರೀಯ ಹದ್ದಾರಿಯಲ್ಲಿ ಅಪಘಾತದಿಂದ ಸಾವು ನೋವು ಸಂಭವಿಸಿದರೆ ಹೆದ್ದಾರಿ ಇಲಾಖೆ  ಹೊಣೆಯಾಗಬೇಕಾಗುತ್ತದೆ. ಕಾಮಗಾರಿ ಸ್ಥಗಿತವಾಗಿರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ. ಹೆದ್ದಾರಿ ಇಲಾಖೆಯವರು ಶೀಘ್ರದಲ್ಲಿಯೇ ಕಾಮಗಾರಿ ನಡೆಸುವುದು ಅಗತ್ಯ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಸೋಮಶೇಖರ್.

ಉನ್ನತ ಅಧಿಕಾರಿಗಳು ಗುತ್ತಿಗೆದಾರರಿಗೆ ಕಾಮಗಾರಿ ಚುರುಕುಗೊಳಿಸಲು ಆದೇಶ ನೀಡಿದ್ದಾರೆ ಎನ್ನುತ್ತಾರೆ ಸ್ಥಳೀಯ ಎಂಜಿನಿಯರ್‌ಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.