ADVERTISEMENT

ವರ್ಷಕ್ಕೆ 2 ಬಾರಿ ರೇಷ್ಮೆ ಸೀರೆ ಪ್ರದರ್ಶನ:ಕೆಎಸ್‌ಐಸಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 7:40 IST
Last Updated 15 ಮಾರ್ಚ್ 2011, 7:40 IST

ಹಾಸನ: ‘ಕೆಎಸ್‌ಐಸಿಯಷ್ಟು ಗುಣಮಟ್ಟದ ರೇಷ್ಮೆ ಹಾಗೂ ರೇಷ್ಮೆ ಸೀರೆಗಳನ್ನು ತಯಾರಿಸುವ ಸಂಸ್ಥೆ ದೇಶದಲ್ಲಿ ಬೇರೆ ಎಲ್ಲೂ ಇಲ್ಲ. ಈ ಸಂಸ್ಥೆ ತನ್ನ ಉತ್ಪನ್ನಗಳ ಮಾರಾಟದ ಜತೆಗೆ ಗ್ರಾಹಕರ ಆರೋಗ್ಯದ ಕಡೆಗೂ ಗಮನ ಹರಿಸುತ್ತದೆ’ ಎಂದು ಕೆಎಸ್‌ಐಸಿ  ಮೈಸೂರು ಸಿಲ್ಕ್ಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರಟ್ಟಿಹಳ್ಳಿ ತಿಳಿಸಿದರು.

ನಗರದ ಸೀತಾರಾಮಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿರುವ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆ ಬಗ್ಗೆ ಅವರು ಮಾಹಿತಿ ನೀಡಿದರು.‘ರೇಷ್ಮೆ ನೂಲು ತಯಾರಿಕೆಯಿಂದ ಆರಂಭಿಸಿ ಅಂತಿಮ ಉತ್ಪನ್ನ ಹೊರ ತರುವವರೆಗೆ ಎಲ್ಲ ಹಂತಗಳನ್ನೂ ಸಂಸ್ಥೆಯೇ ನಿರ್ವಹಿಸುವುದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಬೇರೆ ಯಾವ ಸಂಸ್ಥೆಯೂ ಇಂಥ ಕೆಲಸ ಮಾಡುತ್ತಿಲ್ಲ. ಕೆ.ಎಸ್.ಐ.ಸಿ ತಯಾರಿಸುವ ರೇಷ್ಮೆ ಸೀರೆಗಳು ವಾಟರ್ ಪ್ರೂಫ್ ಆಗಿರುವು ದರಿಂದ ನೀರು, ಕಾಫಿ ಬಿದ್ದರೂ ಕಲೆಯಾಗುವುದಿಲ್ಲ ಹಾಗೂ ಸುಕ್ಕುಗಟ್ಟುವುದಿಲ್ಲ’ ಎಂದರು.

ಹಾಸನಾಂಬಾ ವಿಕಸನ ಕೇಂದ್ರದ ಅಧ್ಯಕ್ಷೆ ಮಧುರಾ ಎಂ.ಎಸ್ ಮಾತನಾಡಿ, ‘ಕೆಎಸ್‌ಐಸಿ ಸಂಸ್ಥೆ ಉತ್ಪನ್ನಗಳು ಗುಣ ಮಟ್ಟದ್ದಾಗಿವೆ. ಆದರೆ ಹೊಸ ಹೊಸ ವಿನ್ಯಾಸಗಳನ್ನು ಹಾಗೂ ಸೀರೆ ಮೇಲೆ ಕುಸುರಿ ಕೆಲಸಗಳನ್ನೂ ಮಾಡಿ ಮಾರಾಟ ಮಾಡಿದರೆ ಹೆಚ್ಚು ಗ್ರಾಹಕರನ್ನು ಆಕರ್ಷಿಸಬಹುದು ಎಂದರು.

ವಿಶೇಷ ಯೋಜನೆ: ಸಂಸ್ಥೆ ಹಾಸನದಲ್ಲಿ ವರ್ಷಕ್ಕೊಂದು ಬಾರಿ ಪ್ರದರ್ಶನ- ಮಾರಾಟ ನಡೆಸುತ್ತಿತ್ತು. ಉತ್ತಮ ಪ್ರತಿಕ್ರಿಯೆಬಂದ ಹಿನ್ನೆಲೆಯಲ್ಲಿ ವರ್ಷಕ್ಕೆರಡು ಬಾರಿ ಪ್ರದರ್ಶನ ಆಯೋಜಿಸಲು ತೀರ್ಮಾನಿಸಿದೆ. ಗ್ರಾಹಕರಿಗೆ ಶೇ 10 ರಿಂದ 25ರವರೆಗೆ ವಿಶೇಷ ರಿಯಾಯಿತಿಯೂ ನೀಡಲಾಗುತ್ತಿದೆ.  ಸರ್ಕಾರಿ ಉದ್ಯೋಗಿಗಳಿಗೆ ಕಂತಿನಲ್ಲಿ ಹಣ ಪಾವತಿಸುವ ಯೋಜನೆಯನ್ನೂ ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.ಪ್ರದರ್ಶನ ಮತ್ತು ಮಾರಾಟ ಮೇಳೆ ಮಾರ್ಚ್ 18ರವರೆಗೆ ನಡೆಯಲಿದ್ದು ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಗ್ರಾಹಕರು ಖರೀದಿ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.