ADVERTISEMENT

ವರ್ಷದಲ್ಲಿಯೇ ಹೈಟೆಕ್‌ ಈಜುಕೊಳ ಬಂದ್‌

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ: ನಿಲ್ಲದ ಅಕ್ರಮ ಮರಳು ಗಣಿಗಾರಿಕೆ, ಸ್ಥಾಪನೆಯಾಗದ ಕೈಗಾರಿಕೆಗಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:40 IST
Last Updated 28 ಏಪ್ರಿಲ್ 2018, 10:40 IST
ಹೊಳೆನರಸೀಪುರ ಪಟ್ಟಣದಲ್ಲಿ ನಿರ್ಮಿಸಿರುವ ಕಟ್ಟಡ ಮಾಂಸದ, ಮೀನಿನ, ಬಿರಿಯಾನಿ ಹೋಟೆಲ್‌ಗೆ ಸಿಮೀತವಾಗಿದೆ
ಹೊಳೆನರಸೀಪುರ ಪಟ್ಟಣದಲ್ಲಿ ನಿರ್ಮಿಸಿರುವ ಕಟ್ಟಡ ಮಾಂಸದ, ಮೀನಿನ, ಬಿರಿಯಾನಿ ಹೋಟೆಲ್‌ಗೆ ಸಿಮೀತವಾಗಿದೆ   

ಹೊಳೆನರಸೀಪುರ: ರಾಜಕಾರಣದ ಶಕ್ತಿಕೇಂದ್ರವಾದ ಈ ಕ್ಷೇತ್ರದಲ್ಲಿ ಒಂದೇ ಕುಟುಂಬದವರು ದಶಕಗಳ ಕಾಲ ಪ್ರತಿನಿಧಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಚುನಾವಣೆಯ ಹೊಸ್ತಿಲಲ್ಲಿ ಮಾತ್ರ ಪರ, ವಿರೋಧ ಟೀಕೆ ನಿಂತಿಲ್ಲ.

ರಸ್ತೆ ಅಭಿವೃದ್ಧಿ, ಕಾಲೇಜು ಕಟ್ಟಡ, ಕುಡಿಯುವ ನೀರಿನ ಸೌಲಭ್ಯ, ಆಸ್ಪತ್ರೆ ಸೌಲಭ್ಯ ಒದಗಿಸಲಾಗಿದೆ.ಸಮರ್ಪಕ ವಿದ್ಯುತ್‌ ಪೂರೈಕೆಗೆ ಉಪ ಕೇಂದ್ರ ಸ್ಥಾಪನೆ, ನೀರಾವರಿ ಯೋಜನೆ ಹೈಟೆಕ್‌ ಆಸ್ಪತ್ರೆ, ನರ್ಸಿಂಗ್‌ ಕಾಲೇಜು, ಕಾನೂನು ಕಾಲೇಜು, ಹಂಗರ ಹಳ್ಳಿ ರೈಲ್ವೆ ಮೇಲ್ಸೆತುವೆ ಮಂಜೂರಾಗಿದೆ.

ಅಂದಾಜು ₹ 200 ಕೋಟಿ ವೆಚ್ಚದಲ್ಲಿ ಶ್ರೀರಾಮದೇವರ ಅಣೆಕಟ್ಟೆ ಉತ್ತರ, ದಕ್ಷಿಣ ನಾಲೆಗಳ ಆಧುನೀಕರಣ, ಹೆರಿಗೆ ಆಸ್ಪತ್ರೆ, ಹಳೇ ಆಸ್ಪತ್ರೆ, ಹಳೇಕೋಟೆ, ಕೋಡಿಹಳ್ಳಿ, ಪಡುವಲಹಿಪ್ಪೆಯಲ್ಲಿನ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗಿದೆ.

ADVERTISEMENT

ಆದರೆ, ಉದ್ಘಾಟನೆಗೊಂಡ ವರ್ಷದಲ್ಲಿಯೇ ದುರಸ್ತಿ ನೆಪದಲ್ಲಿ ಬಂದ್‌ ಮಾಡಿರುವ ₹ 60 ಲಕ್ಷ ವೆಚ್ಚದ ಈಜುಕೊಳ ಕಾರ್ಯಾರಂಭ ಮಾಡದೇ ಇರುವುದು ನಾಗರಿಕರಿಗೆ ಅಸಮಾಧಾನ ಉಂಟು ಮಾಡಿದೆ.

ಜತೆಗೆ ಪಟ್ಟಣದ ಎಲ್ಲಾ ಮಾಂಸ ಮತ್ತು ಕೋಳಿ ಅಂಗಡಿಗಳನ್ನು ಒಂದೆಡೆಗೆ ಸ್ಥಳಾಂತರಿಸುವವ ಉದ್ದೇಶದೊಂದಿಗೆ ಹಾಸನ –ಮೈಸೂರು ರಸ್ತೆಯಲ್ಲಿ ₹ 2 ಕೋಟಿಗೂ ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಕ್ಕೆ ಅಂಗಡಿಗಳು ಇನ್ನೂ ಸ್ಥಳಾಂತರ ಆಗಿಲ್ಲ. ಬೆರಳಣಿಕೆಯಷ್ಟು ಮಂದಿಗಷ್ಟೇ ಮಾಂಸ, ಕೋಳಿ ಬಿರಿಯಾನಿ ಹೋಟೆಲ್ ಪ್ರಾರಂಭಿಸಲು ಅವಕಾಶ ನೀಡಿದ್ದೂ ಚರ್ಚಾಸ್ಪದವಾಗಿದೆ.

ತಾಲ್ಲೂಕಿನ ಕಾಚೇನಹಳ್ಳಿ, ಕಾಮಸಮುದ್ರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸದ ಕಾರಣಕ್ಕೆ ಗ್ರಾಮೀಣ ಪ್ರದೇಶದ ಜನರು ತೀವ್ರ ಅಸಮಾಧಾನ ಮನೆಮಾಡಿದೆ.

‘ಪಟ್ಟಣದಲ್ಲಿ ಅರ್ಹ ಕಡು ಬಡವರು, ನಿರಾಶ್ರಿತರಿಗೆ ಆಶ್ರಯ ವಸತಿ ಸೌಲಭ್ಯ ದೊರೆತಿಲ್ಲ. ಮನೆ ಇದ್ದವರು, ಸರ್ಕಾರಿ ಉದ್ಯೋಗಿಗಳಿಗೇ ಮನೆ ನೀಡಲಾಗಿದೆ' ಎಂಬುದು ಸ್ಥಳೀಯ ನಿವಾಸಿಗಳ ಆರೋಪ.

ಪದವೀಧರರು ಕೆಲಸ ಇಲ್ಲದೆ ಉದ್ಯೋಗಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ. ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಸ್ಥಾಪನೆಯಾಗಿಲ್ಲ. ಹೇಮಾವತಿ ನದಿ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿಲ್ಲ. ಇದರಿಂದಾಗಿ ಅಂತರ್ಜಲ ಕುಸಿಯುತ್ತಿದೆ. ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಯ 12 ಕೆರೆಗಳು ಸೇರಿದಂತೆ 106 ಕೆರೆಗಳು ಮತ್ತು ಕಟ್ಟೆಗಳು ಒತ್ತುವರಿಯಾಗಿವೆ. ಸರ್ಕಾರಿ ಆದೇಶ ಇದ್ದರೂ ಇವುಗಳ ತೆರವು ಕಾರ್ಯ ಆಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿಂತಿಲ್ಲ. ಜನ, ಜಾನುವಾರುಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ತಪ್ಪಿಲ್ಲ.

ರಸ್ತೆ, ಕುಡಿಯುವ ನೀರಿಗೆ ಆದ್ಯತೆ

‘ಕ್ಷೇತ್ರದಲ್ಲಿ ಶಾಲಾ, ಕಾಲೇಜುಗಳನ್ನು ತೆರೆದಿದ್ದೇನೆ. ದೇವಸ್ಥಾನ, ಸಮುದಾಯ ಭವನ ನಿರ್ಮಿಸಿಕೊಡಲಾಗಿದೆ. ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನಾನು ಇಲ್ಲದ ವೇಳೆ ಬಂದವರ ಸಮಸ್ಯೆಗಳನ್ನು ಪತ್ನಿ ಭವಾನಿ ಆಲಿಸಿ ಪರಿಹಾರ ಕೊಡಿಸಿದ್ದಾರೆ’
–  ಎಚ್.ಡಿ. ರೇವಣ್ಣ, ಶಾಸಕ, ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ಭಯದ ವಾತಾವರಣ

‘ಕ್ಷೇತ್ರದಲ್ಲಿ ಸುತ್ತಾಡಿದ ಬಳಿಕ ಭಯದ ವಾತಾವರಣ ಇರುವುದು ಗೊತ್ತಾಯಿತು. ಜನರು ಸ್ವತಂತ್ರವಾಗಿ ತಮ್ಮ ನೋವುಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಕ್ಷೇತ್ರವನ್ನು ದಶಕಗಳ ಕಾಲ ಒಂದೇ ಕುಟುಂಬದವರು ಆಳಿದರು ಅಭಿವೃದ್ಧಿ ಹೊಂದಿಲ್ಲ. ಈಗಲೂ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಿಲ್ಲ’
 – ಬಿ.ಪಿ. ಮಂಜೇಗೌಡ, ಕಾಂಗ್ರೆಸ್ ಅಭ್ಯರ್ಥಿ

ಉದ್ಯೋಗಕ್ಕೆ ಸಿಗದ ಆದ್ಯತೆ

‘ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಂಡ ಪರಿಣಾಮ ಟಿಕೆಟ್‌ ದೊರೆತಿದೆ. ಕ್ಷೇತ್ರದ ಜನರ ಜತೆ ಒಡನಾಟ ಹೊಂದಿದ್ದೇನೆ. ಹಲವು ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇದೆ. ತಾಲ್ಲೂಕಿನಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಿಲ್ಲ. ಪದವೀಧರರು ಕೆಲಸ ಅರಸಿ ಬೇರೆ ಪಟ್ಟಣಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.’
– ರಾಜುಗೌಡ, ಬಿಜೆಪಿ ಅಭ್ಯರ್ಥಿ

ಬಡವರಿಗೆ ಸೌಲಭ್ಯ ಕಲ್ಪಿಸಿ

ಕ್ಷೇತ್ರದಲ್ಲಿ ಇದುವರೆಗೂ ನಿರ್ಗತಿಕರು, ಬಡವರಿಗೆ ಮೂಲಸೌಲಭ್ಯ ಸಿಕ್ಕಿಲ್ಲ. ಬಡವರ ಮನೆ ಬಾಗಿಲಿಗೆ ಹೋಗಿ ಅವರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡುವ ಮನೋಭಾವ ಇರುವ ನಾಯಕರ ಅವಶ್ಯಕತೆ ಇದೆ 
– ಆರ್. ವಸಂತ ಕುಮಾರ್, ನಿವಾಸಿ

ದುರಸ್ತಿ ಕಾಣದ ರಸ್ತೆ

ತಾಲ್ಲೂಕಿನ ಮಲ್ಲಪ್ಪನಹಳ್ಳಿ ರಸ್ತೆಯನ್ನು 20 ವರ್ಷಗಳಿಂದ ಅಭಿವೃದ್ಧಿ ಪಡಿಸಲಿಲ್ಲ. ಹದಗೆಟ್ಟಿರುವ ರಸ್ತೆಯಲ್ಲಿಯೇ ಜನರು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಹಳ್ಳಿಗಳಿಗೂ ಮೂಲಸೌಲಭ್ಯ ಕಲ್ಪಿಸಬೇಕು
– ಹರೀಶ್, ಮಲ್ಲಪ್ಪನಹಳ್ಳಿ

ನಿರುದ್ಯೋಗ ಸಮಸ್ಯೆ ಬಗೆಹರಿಸಿ

ಉದ್ಯೋಗ ಮೇಳ ಆಯೋಜಿಸುವ ಮೂಲಕ ಗ್ರಾಮೀಣ ಪ್ರದೇಶದ ಪದವೀಧರರಿಗೆ ಕೆಲಸ ದೊರಕಿಸಿಕೊಡಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ವಿದ್ಯಾರ್ಥಿ ವೇತನ ನೀಡಬೇಕು. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು ದೊರೆಯಬೇಕು‌
ಪೂಜಾ, ಸ್ನಾತಕೋತ್ತರ ಪದವೀಧರೆ

ಎಚ್.ವಿ. ಸುರೇಶ್ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.