ADVERTISEMENT

ವಿದ್ಯಾರ್ಥಿ ನವೀನ್ ಕುಮಾರ್ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:20 IST
Last Updated 7 ಫೆಬ್ರುವರಿ 2012, 5:20 IST

ಸಕಲೇಶಪುರ: ತಾಲ್ಲೂಕಿನ ಕಬ್ಬಿನಾಲೆ ರಕ್ಷಿತ ಅರಣ್ಯದಲ್ಲಿ  ಚಾರಣಕ್ಕೆ ತೆರಳಿ ಶನಿವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ಮೃತಪಟ್ಟ ಬೆಂಗಳೂರಿನ ಎಂಜಿನಿಯರ್ ವಿದ್ಯಾರ್ಥಿ ನವೀನ್ ಕುಮಾರ್ ಮೃತ ದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

ಗ್ರಾಮಾಂತರ ಪಿಎಸ್‌ಐ ರಾಜು ನೇತೃತ್ವದಲ್ಲಿ ಗುಂಡ್ಯಾ, ಉಪ್ಪಿನಂಗಡಿ ಹಾಗೂ ಶಿರಾಡಿಯ 15 ಜನ ನುರಿತ ಈಜುಗಾರರ ತಂಡ ಬೆಳಿಗ್ಗೆ 10ಗಂಟೆ ಯಿಂದ ಕಾರ್ಯಾಚರಣೆ ನಡೆಸಿ ಮಧ್ಯಾಹ್ನ 1.30ರ ಸುಮಾರಿಗೆ ನದಿಯ ಸುಮಾರು 20 ಅಡಿ ಆಳದ ಹೊಂಡ ದೊಳಗೆ ಮರದ ಬೇರಿನಲ್ಲಿ ಮೃತ ದೇಹ ಸಿಕ್ಕಿಹಾಕಿಕೊಂಡಿರುವುದು ಪತ್ತೆ ಯಾಯಿತು. ಮೈ ಕೊರೆಯುವಷ್ಟು ತಣ್ಣಗಿರುವ ನೀರಿನಲ್ಲಿ ಈಜುಗಾರರು ಆಳಕ್ಕೆ ಇಳಿದು ಮೃತ ದೇಹವವನ್ನು ಹೊರ ತೆಗೆದರು.

ನವೀನ್ ಮೃತಪಟ್ಟ ಸ್ಥಳದಿಂದ ಆತನ ಮೃತ ದೇಹವನ್ನು 15 ಕಿ.ಮೀ, ಕಾಡಿನ ದುರ್ಘಮ ಹಾದಿಯಲ್ಲಿ ಹೆದ್ದಾರಿ ವರೆಗೆ ಹೊತ್ತು, ಅಲ್ಲಿಂದ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಂದಾಗ ಡಿವೈಎಸ್‌ಪಿ ಉಪೇಂದ್ರ, ಇನ್ಸ್‌ಪೆಕ್ಟರ್ ಗಣೇಶ್, ಪಿ ಎಸ್ ಐ ರಾಜು, ಆರ್ ಎಫ್ ಓ ರತ್ನಪ್ರಭ, ತಹಸಿಲ್ದಾರ್ ಚಂದ್ರಮ್ಮ, ಮೃತನ ಸಹೋದರ ಕಾರ್ತಿಕ್ ಹಾಗೂ ಕೆಲವು ಸಂಬಂಧಿಕರು ಮಾತ್ರ ಇದ್ದರು.

ದೂರು ನೀಡಲಾಗುವುದು: `ಸಹೋದರ ನವೀನ್‌ಗೆ ಈಜು ಬರುತ್ತಿರಲಿಲ್ಲ, ಆದರೂ ಆತನನ್ನು ನೀರಿಗೆ ಇಳಿಸಿದ್ದು ಏಕೆ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ. ಮೃತ ದೇಹವನ್ನು ಕಾಡಿನಿಂದ ಆಸ್ಪತ್ರೆಗೆ ತರುವಷ್ಟರಲ್ಲಿ ಅವನೊಂದಿಗೆ ಬಂದಿದ್ದ ಎಲ್ಲಾ 13 ಜನ ವಿದ್ಯಾರ್ಥಿಗಳು ಮೃತ ದೇಹ ನೋಡುವಷ್ಟು ಸೌಜನ್ಯ ತೋರದೆ ಹೋಗಿರುವುದು ಕೂಡ ಅನುಮಾನ ಹುಟ್ಟಿಸಿದೆ.
 
ಚಾರಣಕ್ಕೆ ನವೀನ್ ಜೊತೆ ಬಂದಿದ್ದ ಉಳಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ~ ಮೃತ ನವೀನ್ ಸಹೋದರ ಕಾರ್ತಿಕ್ ಸುದ್ದಿಗಾರರಿಗೆ ಹೇಳಿದರು.

ಬಡ ಕುಟುಂಬ: ನವೀನ್ ತಂದೆ ಚಲುವರಾಜ್ ಅನಾರೋಗ್ಯದಿಂದ ಆರು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಾಯಿ ಖಾಸಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದರೆ, ಅಣ್ಣ ಕಾರ್ತಿಕ್ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಕೆ.ಆರ್. ಪುರಂ ಬೂದಿಗೆರೆ ಕ್ರಾಸ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ನವೀನ್ ರ‌್ಯಾಂಕ್ ವಿದ್ಯಾರ್ಥಿಯಾಗಿದ್ದರಿಂದ  ಎಂಜಿನಿಯರ್ ಮಾಡಬೇಕು ಎಂದು ಪಣ ತೊಟ್ಟಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.