ADVERTISEMENT

ವಿದ್ಯುತ್ ಅಭಾವ, ಕುಡಿಯುವ ನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:35 IST
Last Updated 21 ಸೆಪ್ಟೆಂಬರ್ 2011, 5:35 IST

ಚನ್ನರಾಯಪಟ್ಟಣ: ತಾಲ್ಲೂಕಿನ ಗಡಿಭಾಗದಲ್ಲಿರುವ ಅಣತಿ ಗ್ರಾಮದಲ್ಲಿ ಐತಿಹಾಸಿಕ ಹಿರಿಮೆ ಸಾರುವ ದೇಗುಲಗಳಿವೆ. ಗ್ರಾ.ಪಂ. ಕೇಂದ್ರಸ್ಥಾನವಾದ ಊರಿನಲ್ಲಿ ಆಸ್ಪತ್ರೆ, ಗ್ರಂಥಾಲಯ, ಪಶು ಆಸ್ಪತ್ರೆ, ಹಾಸ್ಟೆಲ್, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಕಾಲೇಜು... ಹೀಗೆ ಸಾಕಷ್ಟು ಸೌಲಭ್ಯಗಳಿವೆ.

ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಗ್ರಾಮವಿದೆ. ಗ್ರಾಮದಿಂದ ತಿಪಟೂರು ಕೇವಲ 15 ಕಿಮೀ ದೂರದಲ್ಲಿದೆ. ವ್ಯವಹಾರಕ್ಕೆ ತಿಪಟೂರಿಗೆ ಹೋಗುವ ಜನತೆ, ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ  ಮಾಹಿತಿ ಪಡೆಯಲು ತಾಲ್ಲೂಕು ಕೇಂದ್ರಕ್ಕೆ ಆಗಮಿಸುತ್ತಾರೆ.

  ಯಡಿಯೂರು ಸಿದ್ದಲಿಂಗೇಶ್ವರರ ಸಮಕಾಲೀನರಾದ ದಿಗಂಬರೇಶ್ವರ, ಕೋರಣ್ಯಕ್ಕಾಗಿ ಈ ಹಿಂದೆ ಗ್ರಾಮ ಪ್ರವೇಶಿಸಿದರು. ಇಲ್ಲಿನ ಪ್ರಶಾಂತ ವಾತಾವರಣ ಇಷ್ಟ ಪಟ್ಟು ಇಲ್ಲೆ ನೆಲೆಸಿದರು.  ನಂತರ ಸಜೀವ ಸಮಾಧಿ ಹೊಂದಿದರು ಎಂಬ ಪ್ರತೀತಿ ಇದೆ. ಸಜೀವ ಸಮಾಧಿ  ಹೊಂದಿದ ಸ್ಥಳ ದಲ್ಲಿ ದೇಗುಲ ನಿರ್ಮಾಣ ಮಾಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಹಳೇಬೀಡಿನ ದೋರಸಮುದ್ರ ಕೆರೆ ಬಿಟ್ಟರೆ ಎರಡನೇ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಗ್ರಾಮದ್ದಾಗಿದೆ. 700 ಎಕರೆ ವಿಸ್ತಾರ ಹೊಂದಿದ್ದು, ಇದು `ಹಣತೆ~ ಆಕಾರದಲ್ಲಿರುವುದರಿಂದ `ಅಣತಿ~ ಎಂದು ಹೆಸರು ಚಾಲ್ತಿಗೆ ಬಂತು. ಮತ್ತೊಂದು ರೀತಿಯಲ್ಲಿ `ಅನಂತಿ~ ಎಂಬ ಮಹಿಳೆಯಿಂದ ~ಅಣತಿ~ ಹೆಸರು ಬಂತು ಗ್ರಾಮಸ್ಥರು ವಿಶ್ಲೇಷಿಸುತ್ತಾರೆ.

ಮುಜುರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಲಕ್ಷ್ಮೀಕಾಂತ ದೇಗುಲವಿದೆ. ಅಪರೂಪದ ವಿಷ್ಣು ಮೂರ್ತಿ ದೇವಸ್ಥಾನ ಇದೆ. ಉದ್ಭವಗೊಂಡ ಸೋಮೇಶ್ವರ ಮೂರ್ತಿ ಇದೆ. ಒಂದೇ ದಿನದಲ್ಲಿ ಕೆರೆಗೋಡಿನ ಶಂಕರೇಶ್ವರ, ಅಣತಿಯ ಸೋಮಶ್ವೇರ, ನವಿಲೆ ನಾಗೇಶ್ವರ, ಜಂಬೂರು ಜಕ್ಕೇಶ್ವರ, ಪಟ್ಟಣದ ಗದ್ದೆರಾಮೇಶ್ವರ. ಹೀಗೆ 5 ಲಿಂಗ ದರ್ಶನ ಮಾಡಿದರೆ. ತಲಕಾಡಿನ  ಪಂಚಲಿಂಗಗಳ ದರ್ಶನ ಪಡೆದಷ್ಟು ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ.

ಇಷ್ಟೆಲ್ಲಾ ಇದ್ದರೂ ಕೆಲವೊಂದು ಸಮಸ್ಯೆಗಳು ಇವೆ. ಕರೆಂಟಿನ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೆ ತೊಂದರೆಪಡಬೇಕಾಗುತ್ತದೆ.

ಬಸ್ ಸೌಕರ್ಯದ ತೊಂದರೆ ಇತ್ತು. ಈಚೆಗೆ ಸಾರಿಗೆ ಅಧಿಕಾರಿಗಳಿಗೆ    ಮನವಿ ಸಲ್ಲಿಸಿದ ಮೇರೆಗೆ ಬಸ್‌ನ ಸಮಸ್ಯೆ ಇಲ್ಲ. ಬಡವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಒಂದುವರೆ ವರ್ಷದ ಹಿಂದೆ ಸಮುದಾಯ ಭವನದ ಕಾಮಗಾರಿ ಆರಂಭವಾಯಿತು.

 ಅನುದಾನದ ಕೊರತೆಯಿಂದ ಆರು  ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಊರಲ್ಲಿ ಕೆಲಕಡೆ    ಮಾತ್ರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಉಳಿದ ರಸ್ತೆಗಳು ಉತ್ತಮವಾಗಿಲ್ಲ. ಚರಂಡಿ ವ್ಯವಸ್ಥೆ    ಚೆನ್ನಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.