ADVERTISEMENT

ವಿದ್ಯುತ್ ತಂತಿ ಅಳವಡಿಕೆ ಸ್ಥಗಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 10:00 IST
Last Updated 15 ಜೂನ್ 2011, 10:00 IST

ಹಾಸನ: ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೈಟೆನ್ಷನ್ ವಿದ್ಯುತ್ ತಂತಿ ಅಳವಡಿಕೆ ಕಾಮಗಾರಿಯನ್ನು ನಾಲ್ಕೈದು ದಿನಗಳ ಕಾಲ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಮಂಗಳವಾರ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೋಬಳಿಯ ಅಂಬುಗದಲ್ಲಿ ಸೋಮವಾರ ಸಂಜೆ ಗ್ರಾಮಸ್ಥರನ್ನು ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಕಚೇರಿಯಲ್ಲಿ ರೈತರು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳ ಸಭೆ ಕರೆದು, `ಅಧಿಕಾರಿಗಳು ವಾಸ್ತವ ವರದಿ ಸಿದ್ಧಪಡಿಸಿ ಕೊಡುವವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕೆಪಿಟಿಸಿಎಲ್ ಅಧಿಕಾರಿಗಳ ಜತೆ ಹೋಗಿ ಗ್ರಾಮಸ್ಥರೊಡನೆ ಮಾತುಕತೆ ನಡೆಸಿ ನಾಲ್ಕು ದಿನದೊಳಗೆ ವಾಸ್ತವ ವರದಿ ನೀಡಬೇಕು~ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿನ್ನೆಲೆ: ಕೆಪಿಟಿಸಿಎಲ್ ನಂದಿಕೂರು ವಿದ್ಯುತ್ ಸ್ಥಾವರದಿಂದ ಹಾಸನಕ್ಕೆ ವಿದ್ಯುತ್ ತರಲು ಹೈಟೆನ್ಷನ್ ಲೈನ್ ಹಾಕುತ್ತಿದ್ದಾರೆ. ಜಿಲ್ಲೆಯ ಸಕಲೇಶಪುರ, ಆಲೂ, ಹಾಸನ ಭಾಗದ ಅನೇಕ ರೈತರು ಇದಕ್ಕಾಗಿ ಹಲವು ಎಕರೆಗಳಷ್ಟು ಜಮೀನು ನೀಡಿದ್ದಾರೆ. ಅನೇಕ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ ಎಂಬ ದೂರು ಮೊದಲಿನಿಂದಲೂ ಕೇಳಿಬಂದಿತ್ತು. ಈಗ ಸಕಲೇಶಪುರ ಹಾಗೂ ಆಲೂರು ವ್ಯಾಪ್ತಿಯಲ್ಲಿ ಲೈನ್ ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಹಾಸನ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿದೆ.

ಸೋಮವಾರ ಸಂಜೆ ಅಂಬುಗದ ಶಕನಿ ಗೌಡ ಎಂಬುವರ ಜಮೀನಿನಲ್ಲಿ ಲೈನ್ ಅಳವಡಿಸಲು ಬಂದಾಗ ಮನೆಯವರು ವಿರೋಧಿಸಿ, `ನಮಗೆ ಇನ್ನೂ ಪರಿಹಾರ ಬಂದಿಲ್ಲ, ಪರಿಹಾರ ಕೊಟ್ಟ ಬಳಿಕ ಕಾಮಗಾರಿ ನಡೆಸಿ~ ಎಂದು ವಾದಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಪೊಲೀಸರು ಮನೆಯವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು ಎಂದು ಶಕನಿಗೌಡ ಅವರ ಮನೆಯವರು ಆರೋಪಿಸಿದ್ದಾರೆ. ಘಟನೆ ನಡೆದ ಕೂಡಲೇ ರೈತ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಶಕನಿಗೌಡ ಅವರು ಘಟನೆಯ ವಿವರವನ್ನು ಜಿಲ್ಲಾಧಿಕಾರಿಗೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ತುರ್ತು ಸಭೆ ಕರೆದಿದ್ದರು.

ಸಭೆಗೆ ಬಂದಿದ್ದ ರೈತರಲ್ಲಿ ಹಲವರು ಕೆಪಿಟಿಸಿಎಲ್ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ಅಭಿವೃದ್ಧಿಗೆ ನಾವು ಅಡ್ಡಿಪಡಿಸುವುದಿಲ್ಲ. ನಮ್ಮಲ್ಲಿ ಕೆಲವರು ಕೇವಲ ಒಂದು ಎಕರೆ ಜಮೀನು ಹೊಂದಿದ್ದಾರೆ. ಅದರಲ್ಲಿ ಅರ್ಧ ಭಾಗ ಟವರ್ ಅಳವಡಿಕೆಗೆ ಹೋಗಿದೆ. ಉಳಿದ ಅರ್ಧ ಎಕರೆಯಲ್ಲಿ ಏನು ಬೆಳೆಯಬೇಕು? ಐದು- ಹತ್ತು ಸಾವಿರ ಪರಿಹಾರ ನೀಡಿದರೆ ಜೀವನ ನಡೆಸುವುದಾದರೂ ಹೇಗೆ ? ಸಾಕಷ್ಟು ಮುಂಚಿತವಾಗಿ ನಮಗೆ ನೋಟಿಸ್ ಸಹ ನೀಡದೆ ಏಕಾಯೇಕಿ ಬಂದು ಕಾಮಗಾರಿ ಆರಂಭಿಸುತ್ತಾರೆ. ಹೊಲದಲ್ಲಿ ಎದ್ದುನಿಂತಿರುವ ಬೆಳೆ ನಾಶಮಾಡುತ್ತಿದ್ದಾರೆ.

ಪರಿಹಾರ ಮೊತ್ತ ಕೈಗೆ ಸಿಗುವ ಮೊದಲೇ ಪೊಲೀಸ್ ಬಲವನ್ನು ಬಳಸಿ ಕಾಮಗಾರಿ ಮಾಡುತ್ತಾರೆ. ನಾವು ಜಮೀನು ಕೊಟ್ಟು ಪೊಲೀಸರಿಂದಲೂ ಒದೆ ತಿನ್ನುವಂಥ ಸ್ಥಿತಿ ಬಂದಿದೆ~ ಎಂದು ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡರು.

ರೈತರ ದೂರು ಆಲಿಸಿದ ಜಿಲ್ಲಾಧಿಕಾರಿ ಜಗದೀಶ್, `ವಿದ್ಯುತ್ ಹಾಗೂ ಫೋನ್ ಲೈನ್ ಕಂಬ ಹಾಕಲು ಭೂಮಿ ಪರಿಹಾರ ಕೊಡುವುದಿಲ್ಲ. ದೇಶಾದ್ಯಂತ ಇದೇ ವ್ಯವಸ್ಥೆ ಇದೆ. ಆದರೆ ಬೆಳೆ ಹಾನಿಯಾದರೆ ಅದಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇಲ್ಲಿ ಹೈಟೆನ್ಷನ್ ವೈರ್ ಹಾಕಲು ದೊಡ್ಡ ಪ್ರಮಾಣದಲ್ಲಿ ಭೂಮಿ ಹೋಗುವುದರಿಂದ ರೈತರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ಉಳಿದಂತೆ ಬೆಳೆನಾಶದ ಬಗ್ಗೆ ವಾಸ್ತವ ವರದಿ ಸಿದ್ಧಪಡಿಸಲು ಆದೇಶ ನೀಡಿದ್ದೇನೆ, ರೈತರು ಸಹಕಾರ ನೀಡಬೇಕು.

ಇನ್ನು ಮುಂದೆ ರೈತರ ಮೇಲೆ ಪೊಲೀಸ್ ದೌರ್ಜನ್ಯ ನಡೆಯದಂತೆ ಎಚ್ಚರ ವಹಿಸುತ್ತೇವೆ~ ಎಂದರು. ಜತೆಗೆ ಯಾವುದೇ ರೈತರ ಜಮೀನಿನಲ್ಲಿ ಕಾಮಗಾರಿ ನಡೆಸುವುದಕ್ಕೂ ಆರು ತಿಂಗಳ ಮುಂಚಿತವಾಗಿ ರೈತರಿಗೆ ಕಡ್ಡಾಯವಾಗಿ ನೋಟಿಸ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಪಿಟಿಸಿಎಲ್  ಸುಪರಿಂಟೆಂಡೆಂಟ್ ಎಂಜಿನಿಯರ್ ಬೋಪಯ್ಯ, ಕಾರ್ಯ ನಿರ್ವಾಹಕ ಎಂಜಿನಿಯರ್  ಹೊನ್ನೇಗೌಡ, ಕೃಷಿ ಜಂಟಿ ನಿರ್ದೇಶಕ ಶಿವರಾಜ್ ಮತ್ತಿತರರು ಇದ್ದರು.

ಕಡಿಮೆ ಪರಿಹಾರ: ರೈತರ ದೂರು
`ಯಾವುದೋ ಮಾನದಂಡ ಅನುಸರಿಸಿ `ಬಿ~ ಗ್ರೇಡ್ ಆಧಾರದಲ್ಲಿ ನನಗೆ ಪರಿಹಾರ ಘೋಷಿಸಿದ್ದಾರೆ. ಪರಿಹಾರ ಇನ್ನೂ ಪಡೆದಿಲ್ಲ, ಆದರೂ ಮನೆಕಡೆ ಬಂದು ಬೆಳೆ ನಾಶಮಾಡಿದ್ದಾರೆ. ಮನೆಯವರ ಮೇಲೆ ಲಾಠಿ ಬೀಸಿದ್ದಾರೆ~ ಎಂದು ಭೂಮಿ ಕಳೆದುಕೊಳ್ಳಲಿರುವ ರೈತ ಶಕನಿಗೌಡ ದೂರಿದರು.

ವಿದ್ಯುತ್ ಲೈನ್‌ಗಾಗಿ ಒಂದು ಸಾವಿರ ಅಡಿಕೆ ಮರ, 120 ತೆಂಗಿನ ಮರ, 15 ಮಾವಿನ ಮರ, ಶುಂಠಿ ಹಾಗೂ ಬತ್ತದ ಗದ್ದೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವೇ ಕೆಲವು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹೆಚ್ಚಿನ ಪರಿಹಾರ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.

`ಸೋಮವಾರ ಸ್ಥಳಕ್ಕೆ ಬಂದಿದ್ದ ಪೊಲೀಸರು ಮನೆಯ ಮಹಿಳೆಯರನ್ನು ಅವಾಚ್ಯವಾಗಿ ಬೈದಿದ್ದಾರೆ. ಮಾತ್ರವಲ್ಲದೆ ಜಿಲ್ಲಾಧಿಕಾರಿಗಳ ಆದೇಶ ಇದೆ ಎಂದು ಬೆದರಿಸಿ ಕೆಲವರನ್ನು ಥಳಿಸಿದ್ದಾರೆ. ಬತ್ತ, ಶುಂಠಿಯ ಹೊಲದಲ್ಲಿ ಟ್ರ್ಯಾಕ್ಟರ್ ಹಾಗೂ ಜೀಪ್ ಓಡಿಸಿ ಬೆಳೆಯನ್ನು ನಾಶಮಾಡಿದ್ದಾರೆ~ ಎಂದು ಮಂಗಳಲಕ್ಷ್ಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.