ADVERTISEMENT

ವಿದ್ಯುತ್ ಸಮಸ್ಯೆ: ವಿವಿಧೆಡೆ ಯುವ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 7:45 IST
Last Updated 2 ಅಕ್ಟೋಬರ್ 2012, 7:45 IST

ಬೇಲೂರು: ವಿದ್ಯುತ್ ಸಮಸ್ಯೆ ಬಗೆ ಹರಿಸಲು ರಾಜ್ಯ ಸರ್ಕಾರ ವಿಫಲ ವಾಗಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.

ಮಯೂರ ವೇಲಾಪುರಿ ಹೋಟೆಲ್ ಬಳಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ವಿದ್ಯುತ್ ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಬಸ್ ನಿಲ್ದಾಣದ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್‌ಗೌಡ ಮಾತನಾಡಿ, ಬರಗಾಲದಲ್ಲಿ ವಿದ್ಯುತ್ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ಕೆ.ಪಿ. ಶೈಲೇಶ್, ಎಂ.ಆರ್. ವೆಂಕಟೇಶ್, ಎಂ.ಜೆ. ನಿಶಾಂತ್, ಬಿ.ಎ. ಜಮಾಲು ದ್ದೀನ್, ಜುಬೇರ್ ಆಹಮದ್, ಸಲೀಂ, ಸತ್ಯನಾರಾಯಣ, ಬಷೀರ್, ನವೀದ್ ಇದ್ದರು.

ಹೊಳೆನರಸೀಪುರ ವರದಿ: ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ವಿದ್ಯುತ್ ನಿಲುಗಡೆ ಮಾಡುವುದನ್ನು ವಿರೋಧಿಸಿ ಹಾಗೂ ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಸೆಸ್ಕ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮೆರವಣಿಗೆ ನಡೆಸಿದ ನಂತರ, ಸೆಸ್ಕ್ ಕಚೇರಿ ಮುಂದೆ ಕುಳಿತು ವಿದ್ಯುತ್ ಸಮರ್ಪಕ ಪೂರೈಕೆಗೆ ಒತ್ತಾಯಿಸಿದರು. ರೈತರು ಜಮೀನಿಗೆ ನೀರು  ಹಾಯಿಸಿಲು ಸಮರ್ಪಕ ವಿದ್ಯುತ್ ಅವಶ್ಯಕ. ಈಗ ಬೆಳೆಗಳು ಒಣಗುತ್ತಿವೆ ಎಂದು ಕಾರ್ಯಕರ್ತರು ದೂರಿದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಹರೀಶ್ ಮಾತನಾಡಿ, ರಾಜ್ಯದಲ್ಲಿ ಬರಗಾಲದ ಜತೆಗೆ ವಿದ್ಯುತ್ ಕ್ಷಾಮ ತಲೆದೋರಿದ್ದು, ಜನ ಸಾಮಾನ್ಯರ ಕಷ್ಟ ನಿವಾರಿಸಲು ಬಿಜೆಪಿ ವಿಫಲವಾಗಿದೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಕೆ.ದೀಪಕ್, ದುದ್ದ ಬ್ಲಾಕ್ ಅಧ್ಯಕ್ಷ ಸಿ.ಕೆ. ಸುರೇಶ್, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಜಲೇಂದ್ರ, ವಕೀಲ ಮಂಜುನಾಥ್, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಸತ್ತಾರ್‌ಖಾನ್ ಹಾಗೂ ಕಾರ್ಯಕರ್ತರು ಇದ್ದರು.

ಸಕಲೇಶಪುರ ವರದಿ: ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಸೋಮವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಪಶ್ಚಿಮಘಟ್ಟದ ಅಮೂಲ್ಯ ಮಳೆಕಾಡುಗಳನ್ನು ನಾಶ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾ ಗುತ್ತಿದ್ದರೂ, ದಿನದಲ್ಲಿ ಸರಿಯಾಗಿ 12ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಇಲ್ಲ. ಮಧ್ಯವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಹೆಚ್ಚಾಗಿ ವಿದ್ಯುತ್ ಖಡಿತ ಮಾಡಲಾಗುತ್ತಿದೆ. ನಿಗದಿತ ಸಮಯವನ್ನು ಒಂದು ದಿನವೂ ಪಾಲನೆ ಮಾಡದೆ ಮನಸ್ಸಿಗೆ ಬಂದಾಗ ಖಡಿತ ಮಾಡಲಾಗುತ್ತದೆ. ಎಷ್ಟು ಗಂಟೆಗೆ ವಿದ್ಯುತ್ ಸಂಪರ್ಕ ನೀಡುತ್ತೀರಿ ಎಂದು ಕರೆ ಮಾಡಿದರೆ ಯಾರೊಬ್ಬರೂ ಮಾಹಿತಿ ನೀಡುವುದಿಲ್ಲ ಎಂದು ಆರೋಪಿಸಿದರು.

ಇಡೀ ತಾಲ್ಲೂಕು ಕತ್ತಲೆಯಲ್ಲಿದೆ. 24ಗಂಟೆ ವಿದ್ಯುತ್ ಪೂರೈಕೆ ಮಾಡ ಬೇಕು. ಇಲ್ಲವಾದರೆ ತಾಲ್ಲೂಕಿನ ಎಲ್ಲ ಕಿರು ಜಲವಿದ್ಯುತ್ ಯೋಜನೆಗಳನ್ನು ಬಂದ್ ಮಾಡಬೇಕು ಎಂದರು. ಪಕ್ಷದ ಮುಖಂಡ ವೈ.ಪಿ. ರಾಜೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೌಡಹಳ್ಳಿ ಲೋಹಿತ್, ಕಾರ್ಯದರ್ಶಿ ಅನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.