ADVERTISEMENT

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 7:10 IST
Last Updated 3 ಡಿಸೆಂಬರ್ 2013, 7:10 IST

ಅರಸೀಕೆರೆ:  ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ  ತಾಲ್ಲೂಕು ಬಿಜೆಪಿ ಘಟಕ, ರೈತ ಸಂಘ, ಹಸಿರು ಸೇನೆ ಹಾಗೂ ಪ್ರಗತಿ ಪರ ಸಂಘಟನೆಗಳ ಕಾರ್ಯರ್ತರು ಸೋಮವಾರ  ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ  ರೇಣುಕುಮಾರ್‌, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ  ಹರಳಕಟ್ಟದ ರಮೇಶ್‌, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್‌, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಿ.ವಿ.ಟಿ  ಬಸವರಾಜು ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಕೈಯಲ್ಲಿ ಭಿತ್ತಿ ಪತ್ರ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿ.ಎಚ್‌ ರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ಹೊರಟು ಪಟ್ಟಣದ ಪಿಪಿ ವೃತ್ತದಲ್ಲಿ ಸಮಾಪನ ಗೊಂಡಿತು.

ಎನ್‌.ಡಿ. ಪ್ರಸಾದ್‌ ಮಾತನಾಡಿ, ತಾಲ್ಲೂಕಿನಲ್ಲಿ ಮಳೆ ಇಲ್ಲದೆ ರೈತರು ತತ್ತರಿಸಿದ್ದು, ಯಾವುದೇ ಕೆರೆ– ಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿನ ತತ್ವಾರ ಉಂಟಾಗಿರುವಾಗ ಸರ್ಕಾರ ರಾಜಕೀಯ ಪ್ರೇರಿತವಾಗಿ ಜಿಲ್ಲೆಯ ಬೇಲೂರು ಮತ್ತು ಅರಕಲಗೂಡು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ  ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜಕೀಯ ಪ್ರೇರಿತ: ಜಿಲ್ಲೆಯಲ್ಲಿ ಎರಡು ಜೀವ ನದಿಗಳು ಹರಿದರೂ ನೀರಾವರಿಯಿಂದ ವಂಚಿತವಾಗಿ ಸದಾ ಬರದ ತಾಲ್ಲೂಕು ಎಂದು ಹಣೆಪಟ್ಟಿ ಹೊಂದಿ ಮುಗಿಲ ಮಳೆಯನ್ನೇ ಆಶ್ರಯಿಸಿರುವ ಸಂಪೂರ್ಣ ಬಯಲು ಪ್ರದೇಶವಾಗಿದೆ. ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕಟ್ಟಿದ್ದು, ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದರೂ ಬರಪೀಡಿತ ಪಟ್ಟಿಗೆ ಸೇರಿಸದೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಕಿಡಿಕಾರಿದರು..

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು ಮಾತನಾಡಿ,  ಕಳೆದ ಐದಾರು ವರ್ಷಗಳಿಂದಲೂ ವರುಣನ ಅವಕೃಪೆಗೆ ಒಳಗಾಗಿ ಮಳೆಯ ಅಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಜಾನುವಾರು ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತು ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ  ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ, 700 ರಿಂದ 1000 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಅನುಸರಿಸಿರುವ ಮಾನದಂಡವೇನೂ ಎಂಬುದು ಜನರಿಗೆ ಗೊತ್ತಾಗಬೇಕಿದೆ ಎಂದು ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ  ಎ.ಪಿ.ಎಂಸಿ ಸದಸ್ಯ ದುಮ್ಮೇನಹಳ್ಳಿ ಗಂಗಾಧರ್‌, ಕಾರ್ಯದರ್ಶಿ ಮನೋಜ್‌ ಕುಮಾರ್‌, ನಗರ ಘಟಕದ ಅಧ್ಯಕ್ಷ  ಹಿರಣ್ಣಯ್ಯ, ಬಿಜೆಪಿ ಮುಖಂಡರಾದ ವೈ.ಕೆ. ದೇವರಾಜ್‌, ಬೋರನಕೊಪ್ಪಲು ರವಿ, ಎಂ.ಇ. ಲೋಕೇಶ್‌, ಬಾಣಾವರದ ಶೈಲಜಾ ಸುವರ್ಣಮ್ಮ, ರೈತ ಸಂಘದ ಮುಖಂಡರಾದ  ಬೋರನಕೊಪ್ಪಲು ಶಿವಲಿಂಗಪ್ಪ, ಜವೇನಹಳ್ಳಿ ನಿಂಗಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.