ADVERTISEMENT

ವೇತನ ತಡೆಹಿಡಿಯದೆ ಹಣ ದುರುಪಯೋಗ

ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಸದಸ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:52 IST
Last Updated 23 ಮಾರ್ಚ್ 2018, 10:52 IST

ಅರಕಲಗೂಡು: ಪೌರಕಾರ್ಮಿಕರು ಗೈರುಹಾಜರಾದ ದಿನದ ವೇತನವನ್ನು ತಡೆಹಿಡಿಯದೆ ಗುತ್ತಿಗೆದಾರರಿಗೆ ನೀಡುವ ಮೂಲಕ ಹಣದ ದುರುಪಯೋಗ ನಡೆಯುತ್ತಿದೆ ಎಂದು ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಸದಸ್ಯ ಎ.ಸಿ.ಮಂಜುನಾಥ್ ಆರೋಪಿಸಿದರು.

ವಿಶೇಷ ಸಭೆಯು ಅಧ್ಯಕ್ಷ ಕೆ.ಸಿ.ಲೋಕೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಪಟ್ಟಣ ಪಂಚಾಯತಿಯಲ್ಲಿ ಖಾಯಂ ಆಗಿ 10 ಮಂದಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ 39 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 10 ಮಂದಿಯನ್ನು ಕಚೇರಿ ಕೆಲಸ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಕೆಲವು ಕಾರ್ಮಿಕರು ಆಗಾಗ್ಗೆ ಗೈರು ಹಾಜರಾಗುತ್ತಾರೆ. ಅವರಿಗೆ ಹಾಜರಾತಿ ನೀಡಿ ಮಾಸಿಕ ಹಣವನ್ನು ಏಜೆನ್ಸಿ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

‘ಹಾಸನದ ಖಾಸಗಿ ಕಂಪನಿ ಹೊರಗುತ್ತಿಗೆ ಆಧಾರದ ಮೇಲೆ 39 ಮಂದಿ ಪೌರಕಾರ್ಮಿಕರನ್ನು ನಿಯೋಜನೆ ಮಾಡಿದೆ. ಇವರಿಗೆ ಮಾಸಿಕ ₹ 12,800 ವೇತನ ನಿಗದಿಗೊಳಿಸಲಾಗಿದೆ. ಪ್ರತಿ ನೌಕರನ ಹಾಜರಿ, ಗೈರು ಹಾಜರಿಯನ್ನು ನಮೂದು ಮಾಡಿ ಲೆಕ್ಕಪತ್ರ ಶಾಖೆಗೆ ಕಳುಹಿಸಲಾಗುತ್ತಿದ್ದು, ಹಣ ದುರ್ಬಳಕೆ ಆಗಿಲ್ಲ’ ಎಂದು ಆರೋಗ್ಯ ನಿರೀಕ್ಷಕ ಲಿಂಗರಾಜು ಸಭೆಯಲ್ಲಿ ಸ್ಪಷ್ಟನೆ ನೀಡಿದರು.

ಹಣ ದುರುಪಯೋಗಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ. ಕೂಡಲೇ ಆರೋಗ್ಯ ನಿರೀಕ್ಷಕರು ನೀಡಿರುವ ವರದಿ, ನಂತರದಲ್ಲಿನ ಲೆಕ್ಕಪತ್ರ ಶಾಖೆ ಮಾಹಿತಿಯನ್ನು ಪರಿಶೀಲಿಸಿ ಲೋಪವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಲೋಕೇಶ್ ತಿಳಿಸಿದರು.

2018 –19ನೇ ಸಾಲಿಗೆ ಎಸ್ಎಫ್‌ಸಿ ಮುಕ್ತನಿಧಿ ಹಾಗೂ 14ನೇ ಹಣಕಾಸು ಯೋಜನೆಯಡಿ ಒಟ್ಟು ₹ 80 ಲಕ್ಷ ಅನುದಾನ ಬಳಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಬೇಕಿದ್ದು, ಇದಕ್ಕೆ ಸಭೆ ಒಪ್ಪಿಗೆ ನೀಡುವಂತೆ ಮುಖ್ಯಾಧಿಕಾರಿ ಸುಜಯ್‌ ಕುಮಾರ್ ಕೋರಿದರು.

ಸದಸ್ಯರ ಸಲಹೆ ಮೇರೆಗೆ ಕಾಮಗಾರಿಗಳನ್ನು ನಿಗದಿಗೊಳಿಸಬೇಕು ಎಂದು ಸದಸ್ಯರು ಸಲಹೆ ನೀಡಿ ಒಪ್ಪಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಸಭೆಯ ನಡಾವಳಿಯನ್ನು ಸಭೆಯಲ್ಲೆ ದಾಖಲಿಸಬೇಕು ಎಂದು ಜೆಡಿಎಸ್ ಸದಸ್ಯರಾದ ಮಂಜುನಾಥ್, ಅಲೀಂ ಪಾಶ ಆಗ್ರಹಿಸಿದರು.

ಸರ್ಕಾರದ ಸುತ್ತೋಲೆಯಂತೆ 61 ವಾಣಿಜ್ಯ ಮಳಿಗೆಗಳನ್ನು ಮರು ಹರಾಜು ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಇದಕ್ಕೆ ಸಭೆ ಒಪ್ಪಿಗೆ ನೀಡುವಂತೆ ಮುಖ್ಯಾಧಿಕಾರಿ ಕೋರಿದರು.

ಸದಸ್ಯರಾದ ಎಚ್‌.ಎಸ್‌.ಮಂಜುನಾಥ್‌, ಶಶಿಕುಮಾರ್‌, ರಮೇಶ್‌ ವಾಟಾಳ್‌, ನಾಮ ನಿರ್ದೇಶಿತ ಸದಸ್ಯ ಎ.ಎಸ್‌.ಮಂಜುನಾಥ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.