ADVERTISEMENT

ವೈದ್ಯರ ವರ್ಗಾವಣೆ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಮೇ 2011, 5:50 IST
Last Updated 3 ಮೇ 2011, 5:50 IST

ಅರಸೀಕೆರೆ: ವೈದ್ಯರೊಬ್ಬರ ವರ್ಗಾವಣೆ ವಿರೋಧಿಸಿ ಆಸ್ಪತ್ರೆ ಮುಂದೆ ನೂರಾರು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಧರಣಿ ಕುಳಿತ ಪ್ರಸಂಗ ತಾಲ್ಲೂಕಿನ ದೊಡ್ಡಮೇಟಿಕುರ್ಕೆ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು.

ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತಿಮ್ಮರಾಜು ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿರುವ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು.ಸರ್ಕಾರದ ವಿರುದ್ಧ ಘೋಷಣೆ ಕೂಗಿ, ವೈದ್ಯಾಧಿಕಾರಿಗಳ ವರ್ಗಾವಣೆ ಆದೇಶವನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ. ಲೋಕೇಶ್, ಹೈಕೋರ್ಟ್ ಆದೇಶವನ್ನು ಸರ್ಕಾರ ಉಲ್ಲಂಘಿಸಿ ವೈದ್ಯಾಧಿಕಾರಿಗಳನ್ನು ಏಕಾಏಕಿ  ವರ್ಗಾವಣೆ ಮಾಡಿರುವುದರಿಂದ ಗ್ರಾಮೀಣ ಪ್ರದೇಶದ ಜನರು ತೀವ್ರ ತೊಂದರೆ ಅನುಭವಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯ ಎದುರು ಗ್ರಾಮಸ್ಥರು ಧರಣಿ ಕುಳಿತ ಸುದ್ದಿ ತಿಳಿಯುತ್ತಿದ್ದಂತೆ ದಿಢೀರ್ ಎಂದು ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಚ್.ಬಿ. ದಿನೇಶ್ ಸ್ಥಳಕ್ಕೆ ಆಗಮಿಸಿ ಸರ್ಕಾರದ ವರ್ಗಾವಣೆ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವೈದ್ಯರ ಸಂಘ ನ್ಯಾಯಲಯದ ಮೊರೆ ಹೋಗಿದೆ. ಆದರೆ ಇಲ್ಲಿನ ಸಮಸ್ಯೆಯ ಅರಿವು ಇರುವುದರಿಂದ ವೈದ್ಯರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಭರವಸೆ ನಿಡಿದ ನಂತರ ಪ್ರತಿಭಟನಾಕಾರರು ಧರಣಿ ವಾಪಸ್ ಪಡೆದರು.

ಪ್ರತಿಭಟನೆಯ ನೇತೃತ್ವವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿದರ್, ಉಪಾಧ್ಯಕ್ಷ ಗಂಗಾಧರಪ್ಪ, ಸದಸ್ಯರಾದ ಶಿವಮೂರ್ತಿ, ಮರು ಳಪ್ಪ, ಕುಮಾರಸ್ವಾಮಿ, ಚೌಡಪ್ಪ, ವಹಿಸಿದ್ದರು. ಕಣಕಟ್ಟೆ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ರೇವಣ್ಣ, ಹೊಳಲ್ಕೆರೆ ಸತೀಶ್, ನಂಜುಂಡಶೆಟ್ಟಿ, ಎಸ್.ಎಸ್. ಬಸವರಾಜ್, ಜಯದೇವ್, ವೀರಭದ್ರಪ್ಪ(ಸ್ಟೀಲ್) ಪ್ರಕಾ ಮೂರ್ತಿ, ಸುರೇಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.