ADVERTISEMENT

ಶತಮಾನೋತ್ಸವ ಸಂಭ್ರಮದಲ್ಲಿ ಕನ್ನಡ ಶಾಲೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 7:15 IST
Last Updated 24 ಫೆಬ್ರುವರಿ 2011, 7:15 IST

ಹಳೇಬೀಡು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶತಮಾನೋತ್ಸವ ಆಚರಿಸಿಕೊಳ್ಳಲು ಸಿದ್ಧವಾಗುತ್ತಿದೆ, ಶಿಥಿಲ ಗೊಂಡ ಶಾಲಾ ಕಟ್ಟಡ ಬಣ್ಣದಿಂದ ಫಳಫಳಿಸುತ್ತಿವೆ. ಹಳೆಯ ನೆನಪು. ಹೊಸ ಚಿಗುರು ಪಲ್ಲವಿಸಲು ವೇದಿಕೆ ಅಣಿಯಾಗುತ್ತಿದೆ.ಮಾ.5ರಂದು ಶತಮಾನೋತ್ಸವ ಆಚರಣೆ ನಡೆಯಲಿದೆ. ಶಾಲೆಗಾಗಿ ದುಡಿದ ಶಿಕ್ಷಕರು, ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವ ಸಾಧಕರನ್ನು, ಕ್ರೀಡಾ ಸಾಧನೆ ಮಾಡಿದವರು ಕಾರ್ಯಕ್ರಮದಲ್ಲಿ ಭಾಗ ವಹಿಸಲಿದ್ದಾರೆ, ತುಂಟಾಟವಾಡಿದ ಹಳೆ ವಿದ್ಯಾರ್ಥಿಗಳ ಚಟುವಟಿ ಕೆಗಳು ನೆನಪುಗಳು ನೂರು ವರ್ಷ ದಾಟಿದ ಕಟ್ಟಡದಲ್ಲಿ ಕಲರವ ಮೂಡಿಸಲಿವೆ.

ಶಾಲೆಯಲ್ಲಿ ಕಲಿತವರು ಸಾಕಷ್ಟು ಮಂದಿ ಉನ್ನತ ಉದ್ಯೋಗದಲ್ಲಿದ್ಧಾರೆ. ಉದ್ದಿಮೆ ನಡೆಸಿ ಕೊಂಡು ಉಳ್ಳುವರಾಗಿದ್ದಾರೆ. ಶಾಲೆಯಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳಿಗೆ ಶತಮಾನದ ಸಂದೇಶ ರವಾನೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಶಾಲೆಯ ಬಗ್ಗೆ ಅಭಿಮಾನ ತೊರಿದರೆ ಈಗಿನ ಸ್ಥಿತಿಗತಿ ಸುಧಾರಣೆ ಸಾಧ್ಯವಾಗುತ್ತದೆ.ಹಳೇಯ ವಿದ್ಯಾರ್ಥಿಗಳ ಸ್ಪಂದನೆ ಕಡಿಮೆ ಇದ್ದರೂ ಮುಖ್ಯಶಿಕ್ಷಕರು ಹಾಗೂ ಸಿಬ್ಬಂದಿ ಅದ್ದೂರಿ ಕಾರ್ಯಕ್ರಮ ನಡೆಸಲು ಉತ್ಸಾಹ ದಿಂದ ಮುನ್ನುಗ್ಗಿ ಚಡಪಡಿಸುತ್ತಿದ್ದಾರೆ. ವ್ಯಂಗ್ಯದ ಮಾತುಗಳನ್ನು ಮೌನವಾಗಿಯೇ ಸಿಹಿಸಿಕೊಂಡು ಶಾಲೆಯಲ್ಲಿ ಸಂಭ್ರಮೋತ್ಸಾಹ ನಡೆಯುತ್ತಿದೆ.

ಹಿಂದೆ ಶಾಲೆಯಲ್ಲಿ 1000 ಮಕ್ಕಳು ಕಲಿಯುತ್ತಿದ್ದರು. 22 ಶಿಕ್ಷಕರು ಕರ್ತವ್ಯ ನಿರ್ವ ಹಿಸುತ್ತಿದ್ದರು. ಪೋಷಕರು ಖಾಸಗಿ ಶಾಲೆಗಳ ಬಗ್ಗೆ ವ್ಯಾಮೋಹ ಹೊಂದಿದ ನಂತರ ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆಯಾಗಿದೆ. ಈಗ 310 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮೆರಿಟ್ ಆಧಾರದ ಮೇಲೆ ಆಯ್ಕೆಯಾದ 11 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಾಲೆಯ 26 ಕೊಠಡಿಗಳೂ ಸಮಸ್ಯೆ ಎದುರಿಸುತ್ತಿವೆ. ಎಸ್‌ಡಿಎಂಸಿ ಹಾಗೂ ಶಾಸಕರ ಅನುದಾನದಿಂದ ಸ್ವಲ್ಪ ಮಟ್ಟಿಗೆ ಕಟ್ಟಡ ಸುಧಾರಣೆ ಕಾಣುತ್ತಿದೆ. ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಕಾಮಗಾರಿ ಕಳೆಪೆಯಿಂದ ಕೂಡಿದ್ದು, ಆ ಕಟ್ಟಡ ಅವನತಿ ಹಾದಿಯಲ್ಲಿವೆ.

ನೂತನ ಕಟ್ಟಡ ನಿರ್ಮಾಣಕ್ಕೆ ರೂ. 1 ಕೋಟಿ ಹಣ ಮಂಜೂರು ಮಾಡಿಕೊಡುತ್ತೇವೆ ಎನ್ನುವ ಜಿಲ್ಲಾ ಮಂತ್ರಿಗಳ ಭರವಸೆ ಶಿಕ್ಷಕ ವರ್ಗಕ್ಕೆ ಹೆಚ್ಚಿನ ಹುಮ್ಮಸ್ಸು ನೀಡಿದೆ. ಅಪೂರ್ಣಗೊಂಡ ಶೌಚಾಲಯ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಹೈಟೆಕ್ ಶೌಚಾಲಯಕ್ಕೆ ಹಣ ಮಂಜೂರಾಗುವ ಸೂಚನೆ ಸಹ ಕಂಡು ಬಂದಿದೆ. ಮಕ್ಕಳು ಸುರಕ್ಷಿತವಾಗಿ ಓಡಾಡಲು ಹೆಚ್ಚುವರಿ ಗೇಟ್ ನಿರ್ಮಾಣವಾಗಿದೆ. ಶಾಲೆ ಸುತ್ತಮುತ್ತ ಗೂಡಂಗಡಿಗಳ ಕಿರಿಕಿರಿ ಇಲ್ಲ. ಶತಮಾನೋತ್ಸವದ ನೆಪದಲ್ಲಿ ಶಾಲೆ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.