ADVERTISEMENT

ಶಾಸಕರಿಂದ ಕಾಲೇಜು ಜಾಗ ಕಬಳಿಕೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 5:55 IST
Last Updated 7 ಜುಲೈ 2012, 5:55 IST

ಹಾಸನ: `ಹೊಳೆನರಸೀಪುರ ಪಟ್ಟಣದ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಕ್ಕದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಮೂಲಕ ಶಾಸಕ ಎಚ್.ಡಿ.ರೇವಣ್ಣ ಕಾನೂನನ್ನು ಗಾಳಿಗೆ ತೂರಿದ್ದಲ್ಲದೆ ಕಾಲೇಜಿನ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ~ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ ಆರೋಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದರು. `ಕಾಲೇಜು ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಪಾರ್ಕಿಂಗ್‌ಗಾಗಿ ಪಕ್ಕದ ಕಾಲೇಜಿನ ಜಾಗವನ್ನು ಕಬಳಿಸುವ ಉದ್ದೇಶದಿಂದ ಪ್ರಾಂಶುಪಾಲರನ್ನು ಹೆದರಿಸಿ ಎನ್‌ಒಸಿಯನ್ನೂ ಪಡೆಯಲಾಗಿದೆ ಎಂದರು.

`ಈಗಿರುವ ಕಾಲೇಜು ಜಾಗವನ್ನು 1949 ರಲ್ಲಿ ರಂಗಮ್ಮ, ಉದ್ದೂರಯ್ಯ ರಾಮಣ್ಣ ಎಂಬುವವರು ದಾನವಾಗಿ ನೀಡಿದ್ದರು. ಈಗ ಕಾಲೇಜು ಶಿಥಿಲವಾಗಿದೆ ಎಂದು ಅದನ್ನು ಬೇರೆಡೆ ವರ್ಗಾಯಿಸಿ ಜಾಗ ಕಬಳಿಸುವ ಯೋಜನೆ ಸಿದ್ಧವಾಗುತ್ತಿದೆ ಎಂದು ಆರೋಪಿಸಿದರು. ಜತೆಗೆ ಕಾಲೇಜು ಜಾಗವನ್ನು ಕಬಳಿಸಲು ಮುಂದಾದರೆ ಹೊಳೆನರಸೀಪುರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂಸು ಹೇಳಿದರು.

`ರೈತರ ಹೆಸರಿನಲ್ಲಿ ಅಧಿಕಾರ ಹಿಡಿದಿದ್ದ ಜೆಡಿಎಸ್ ಹಾಸನ ತಾಲ್ಲೂಕಿನ ರೈತರ ಸಾವಿರಾರು ಎಕರೆ ಜಮೀನನ್ನು ಸ್ವಾಧೀನ ಮಾಡಿ ರೈತರನ್ನು ನಿರ್ಗತಿಕರನ್ನಾಗಿಸಿದ್ದಾರೆ. ಅದೇ ಭೂಮಿ ಉಳಿಸಲು ಪ್ರತಿಭಟನೆ ಮಾಡುವುದಾಗಿ ಈಗ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚಂದ್ರು, ಬಾಲಶಂಕರ್, ಡಾ.ಮುನಿಸ್ವಾಮಿ, ನಾಗೇಂದ್ರ, ವೆಂಕಟೇಗೌಡ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.