ADVERTISEMENT

ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಸಕಲೇಶಪುರ ತಾಲ್ಲೂಕಿನ ಯಡಕುಮೇರಿ ಸಮೀಪ ಹಳಿ ತಪ್ಪಿದ ಗೂಡ್ಸ್‌ ರೈಲು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:49 IST
Last Updated 19 ಡಿಸೆಂಬರ್ 2013, 5:49 IST

ಸಕಲೇಶಪುರ: ಸಕಲೇಶಪುರ– ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದ ಯಡಕುಮೇರಿ ರೈಲ್ವೆ ನಿಲ್ದಾಣ ಸಮೀಪ ಗೂಡ್ಸ್‌ ರೈಲಿನ ಎಂಜಿನ್‌ ಹಳಿ ತಪ್ಪಿ, ಈ ಮಾರ್ಗದ ಸಂಚಾರ ಸ್ಥಗಿತಗೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಇದರಿಂದಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತಿದ್ದ ಪ್ರಯಾಣಿಕರ ರೈಲು ಹಾಗೂ ಬುಧವಾರ ಬೆಳಿಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ರೈಲುಗಳು ಸಕಲೇಶಪುರ ಹಾಗೂ ಹಾಸನದಿಂದ ಮುಂದೆ ಹೋಗಲಾಗದೆ ಪ್ರಯಾಣಿಕರಿಗೆ ಸಮಸ್ಯೆ ಉಂಟಾಯಿತು.

‘ಮಂಗಳವಾರ ತಡರಾತ್ರಿ 3 ಗಂಟೆ ಸುಮಾರಿಗೆ ಯಡಕುಮೇರಿ ರೈಲ್ವೆ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿ ಗೂಡ್ಸ್‌ ರೈಲಿನ ಎರಡೂ ಎಂಜಿನ್‌ಗಳು ಹಳಿ ತಪ್ಪಿವೆ. ಹಳಿಯಿಂದ ಇಳಿದ ಎಂಜಿನ್‌ಗಳು ಎಡಭಾಗದಲ್ಲಿ ಬೆಟ್ಟದ ಅಂಚಿಗೆ ತಗುಲಿ ನಿಂತಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ
ಬೆಂಗಳೂರಿನಿಂದ ಕಾರವಾರಕ್ಕೆ ಹೋಗುತ್ತಿದ್ದ ಪ್ರಯಾಣಿಕರ ರೈಲು ಮಂಗಳವಾರ ತಡರಾತ್ರಿ 3.30ಕ್ಕೆ ಇಲ್ಲಿಯ ನಿಲ್ದಾಣಕ್ಕೆ ಬಂದಿದೆ. ಅಷ್ಟರೊಳಗೆ ಮುಂದಿನ ಮಾರ್ಗದಲ್ಲಿ ರೈಲಿನ ಎಂಜಿನ್ ಹಳಿ ತಪ್ಪಿರುವ ಮಾಹಿತಿ ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ತಲುಪಿತ್ತು.

ಆದ್ದರಿಂದ ಪ್ರಯಾಣಿಕರ ರೈಲನ್ನು ಇಲ್ಲಿಯೇ ನಿಲ್ಲಿಸಲಾಯಿತು. ಭಾರೀ ಚಳಿ ಇದ್ದ ಕಾರಣ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿ ಇದ್ದಿದ್ದರಿಂದ ರೈಲು ಸಕಲೇಶಪುರ ನಿಲ್ದಾಣದಲ್ಲಿಯೇ ನಿಂತಿದೆ ಎಂಬುದೇ ಹೆಚ್ಚಿನ ಪ್ರಯಾಣಿಕರಿಗೆ ಗೊತ್ತಿರಲಿಲ್ಲ. ಬೆಳಿಗ್ಗೆ 6 ಗಂಟೆಗೆ ಒಬ್ಬೊಬ್ಬರಾಗಿ ಎದ್ದು ಆಚೆ ಬಂದಾಗ ತಾವಿನ್ನೂ ಸಕಲೇಶಪುರದಲ್ಲಿರುವುದು ತಿಳಿದು ಗಲಿಬಿಲಿಗೊಂಡರು.

ಆಸ್ಪತ್ರೆ, ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು, ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮಗಳು ಹಾಗೂ ತುರ್ತು ಕೆಲಸದ ಮೇಲೆ ಹೋಗಲೇಬೇಕಾಗಿದ್ದ ಕೆಲವು ಪ್ರಯಾಣಿಕರು ಚಡಪಡಿಸುತ್ತಿದ್ದುದು ರೈಲ್ವೆ ನಿಲ್ದಾಣದಲ್ಲಿ ಕಂಡು ಬಂತು. ಕೆಲವರು ಆಟೊ ಹಿಡಿದು ಹೊಸ ಬಸ್‌ ನಿಲ್ದಾಣಕ್ಕೆ ಬಂದರೂ, ಮಂಗಳೂರು ಕಡೆಗೆ ಬಸ್ಸುಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣದಲ್ಲಿಯೇ ಕಾಯಬೇಕಾಯಿತು.

1,404  ಪ್ರಯಾಣಿಕರು
ಬೆಂಗಳೂರಿನಿಂದ ಕಾರವಾರದತ್ತ ಹೋಗುತ್ತಿದ್ದ ರೈಲಿನಲ್ಲಿ ಒಟ್ಟು 1,404 ಪ್ರಯಾಣಿಕರು ಇದ್ದರು. ಹಳಿ ತಪ್ಪಿರುವ ಎಂಜಿನ್‌ ತೆಗೆದು ರೈಲು ಓಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಅರಿತ ಅಧಿಕಾರಿಗಳು, ರೈಲ್ವೆ ಪೊಲೀಸರು, ಡಿವೈಎಸ್‌ಪಿ ಎಸ್‌.ಜೆ. ಕುಮಾರಸ್ವಾಮಿ, ಇನ್‌ಸ್ಪೆಕ್ಟರ್‌ ಗುರುರಾಜ್‌, ಪಿಎಸ್‌ಐಗಳಾದ ಜೀವನ್‌, ಭರತ್‌ಗೌಡ ಮುಂತಾದವರು ನಿಲ್ದಾಣದಲ್ಲಿಯೇ  ಇದ್ದು ಪ್ರಯಾಣಿಕರಿಗೆ ಕುಡಿಯುವ ನೀರು, ಆಹಾರ ಹಾಗೂ ಇತರ ವ್ಯವಸ್ಥೆ ಮಾಡಿದರು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಸನ ಡಿಪೋದಿಂದ 15 ಹಾಗೂ ಸ್ಥಳೀಯ ಡಿಪೋದಿಂದ 7 ಬಸ್ಸುಗಳನ್ನು ತರಿಸಿ ಪ್ರಯಾಣಿಕರನ್ನು ಮಂಗಳೂರು, ಉಡುಪಿ, ಕಾರವಾರ, ಮುರುಡೇಶ್ವರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಲ್ಲಾ ಪ್ರಯಾಣಿಕರನ್ನು ಕಳುಹಿಸಲಾಯಿತು.

ಮಂಗಳವಾರ ರಾತ್ರಿ ಬೆಂಗಳೂರಿನಿಂದ ಹೊರಟ ರೈಲು ಸಕಲೇಶಪುರದಲ್ಲಿ ಉಳಿದರೆ, ಬುಧವಾರ ಮುಂಜಾನೆ ಬೆಂಗಳೂರಿನಿಂದ ಹೊರಟು ಮಂಗಳೂರಿನತ್ತ ಹೋಗುತ್ತಿದ್ದ ರೈಲು ಹಾಸನದಿಂದ ಮುಂದೆ ಹೋಗಲಿಲ್ಲ. ಮಧ್ಯಾಹ್ನ ಹಾಸನಕ್ಕೆ ಬಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಇಲ್ಲಿಯೇ ಇಳಿಸಿ ಬಸ್ಸುಗಳ ಮೂಲಕ ಮಂಗಳೂರಿಗೆ ಕಳುಹಿಸಲಾಯಿತು. ಬುಧವಾರ ರಾತ್ರಿ ವೇಳೆಗೆ ಗೂಡ್ಸ್‌ ಎಂಜಿನ್‌ಗಳನ್ನು ತೆಗೆಯುವ ಮತ್ತು ರೈಲು ಮಾರ್ಗದ ದುರಸ್ತಿ ಮುಗಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.