ADVERTISEMENT

ಸಂಭ್ರಮದ ಚೆನ್ನಕೇಶವಸ್ವಾಮಿ ದೊಡ್ಡತೇರು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:51 IST
Last Updated 24 ಏಪ್ರಿಲ್ 2013, 6:51 IST

ಬೇಲೂರು: ಇಲ್ಲಿಯ ಚೆನ್ನಕೇಶವಸ್ವಾಮಿಯ ದೊಡ್ಡ ತೇರು ಮಂಗಳವಾರ ಜನಸಾಗರದ ನಡುವೆ ಅದ್ದೂರಿಯಿಂದ ನಡೆಯಿತು.

ಮೊದಲ ದಿನ ರಥವನ್ನು ಈಶಾನ್ಯ ಮೂಲೆಯಿಂದ ಆಗ್ನೇಯ ಮೂಲೆಗೆ ಎಳೆದು ನಿಲ್ಲಿಸಲಾಗಿತ್ತು. ಇಂದು ದೇವಾಲಯದ ಉಳಿದ ಮೂರು ರಥ ಬೀದಿಗಳಲ್ಲಿ ರಥವನ್ನು ಎಳೆದು ಸ್ವಸ್ಥಾನದಲ್ಲಿ ನಿಲ್ಲಿಸಲಾಯಿತು. ಮಧ್ಯಾಹ್ನದ ವೇಳೆಗೆ ವಿಷ್ಣುಸಮುದ್ರ ಕೆರೆಯ ಬಳಿ ವಾದ್ಯದೊಂದಿಗೆ ಆಗಮಿಸಿದ ನಾಡ ಪಟೇಲರನ್ನು ದೇವಾಲಯದ ಸಂಪ್ರದಾಯದಂತೆ ಗೌರವ ನೀಡಿ ಕೆರೆ ಬೀದಿಯಲ್ಲಿ ಮೆರವಣಿಗೆಯೊಂದಿಗೆ ರಥದ ಬಳಿಗೆ ಕರೆತರಲಾಯಿತು. ಬಳಿಕ ನಾಡ ಪಟೇಲರು ರಥಕ್ಕೆ ಪೂಜೆ ಸಲ್ಲಿಸಿದರು. ನೆರೆದಿದ್ದ ಭಕ್ತರು ರಥದ ಮೇಲಕ್ಕೆ ದವನ ಚುಚ್ಚಿದ ಬಾಳೆಹಣ್ಣನ್ನು ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವದ ನಂತರ ಶಾಂತಿ ಉತ್ಸವ ನಡೆಯಿತು. ಗಂಧ, ಅರಿಸಿನ, ಸುಣ್ಣ, ಕರ್ಪೂರ, ಕೇಸರಿ ಮತ್ತು ಏಲಕ್ಕಿ ಬೆರೆಸಿದ ನೀರನ್ನು ಉತ್ಸವಮೂರ್ತಿ, ದೇವಾಲಯ, ಉಪ ದೇವಾಲಯ, ಪ್ರಕಾರ, ರಥಬೀದಿ ಮತ್ತು ನೆರೆದ ಜನರ ಮೇಲೆ ಪ್ರೋಕ್ಷಣೆ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟ ಮತ್ತು ಕೃಷ್ಣಸ್ವಾಮಿ ಭಟ್ಟ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ತಹಶೀಲ್ದಾರ್ ರವಿಚಂದ್ರ ನಾಯಕ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್, ಉಪ ಸಮಿತಿ ಅಧ್ಯಕ್ಷ ಎನ್.ಆರ್.ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.