ADVERTISEMENT

ಸಂಶೋಧನೆಗಳು ಜನರಿಗೆ ನೆರವಾಗಲಿ

ಉಪನ್ಯಾಸ ಕಾರ್ಯಕ್ರಮ: ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 9:49 IST
Last Updated 21 ಮಾರ್ಚ್ 2018, 9:49 IST
ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ನಡೆದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಮಾತನಾಡಿದರು.
ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ನಡೆದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಮಾತನಾಡಿದರು.   

ಹಾಸನ: ದೇಶದಲ್ಲಿ ನಡೆಯುವ ಎಲ್ಲ ಸಂಶೋಧನೆಗಳು ಜನ ಸಾಮಾನ್ಯರ ಬದುಕಿಗೆ ನೆರವಾಗುವಂತಿರಬೇಕು ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.

ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜಿನ ರಜತ ಮಹೋತ್ಸವ ನೆನಪಿನ 25ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತ ವಿಶ್ವವೇ ಅಚ್ಚರಿ ಪಡುವ ಸಾಧನೆ ಮಾಡಿದೆ ಎಂಬುದು ಹೆಮ್ಮೆಯ ವಿಷಯ. ವಿಕ್ರಂ ಸಾರಾಬಾಯಿ ಮಾರ್ಗದರ್ಶನದಲ್ಲಿ ಆರಂಭಗೊಂಡ ಈ ಯಾತ್ರೆ ಅತ್ಯಂತ ಸಮರ್ಥವಾಗಿ ಸಾಗಿ ಬಂದಿದೆ. ರಷ್ಯಾ ದೇಶ 37 ಉಪಗ್ರಹಗಳನ್ನು ಉಡಾಯಿಸಿ ದಾಖಲೆ ನಿರ್ಮಿಸಿತ್ತು. ಆದರೆ, ಭಾರತ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾಯಿಸುವ ಮೂಲಕ ವಿಶ್ವ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದಿದೆ. ಇದರಿಂದಾಗಿ ವಿಶ್ವದ ಅನೇಕ ದೇಶಗಳು ತಮ್ಮ ಉಪಗ್ರಹ ಉಡಾವಣೆಗೆ ಭಾರತವನ್ನು ಅವಲಂಬಿಸುವ ಸ್ಥಿತಿ ನಿರ್ಮಾಣಗೊಂಡಿದೆ ಎಂದರು.

ADVERTISEMENT

ಪ್ರಸ್ತುತ ಭಾರತ ಉಡಾಯಿಸಿರುವ ಉಪಗ್ರಹಗಳಿಂದ ದೊರೆಯುತ್ತಿರುವ ನಿಖರವಾದ ಮಾಹಿತಿ ಮತ್ತು ಚಿತ್ರಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಕರು ಮತ್ತು ಮೀನುಗಾರರ
ಜೀವನ ಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬಹುದು. ಹೀಗೆ ಕೈಗೊಳ್ಳುವ ಉನ್ನತ ಮಟ್ಟದ ಸಂಶೋಧನೆಗಳು ದೇಶದ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವ ರೀತಿಯಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

ಸಂಶೋಧನೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮಹತ್ತರವಾದದ್ದು. ಈ ನಿಟ್ಟಿನಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿ ಈ ಕ್ಷೇತ್ರವನ್ನು ಬಲ ಪಡಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಅಶೋಕ ಹಾರನಹಳ್ಳಿ, ಪ್ರಾಂಶುಪಾಲೆ ಎಂ.ಬಿ.ಆಶಾಲತಾ, ಎಚ್.ಎಲ್.ಮಲ್ಲೇಶ್‌ಗೌಡ, ಎಸ್.ಸಿ.ಯತೀಶ್ವರ್, ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಉಪಾಧ್ಯಕ್ಷ ಕೆ.ಎಂ.ಶಿವಣ್ಣ, ಖಜಾಂಚಿ ಆರ್.ಶೇಷಗಿರಿ, ಜಂಟಿ ಕಾರ್ಯದರ್ಶಿ ಡಿ.ಸಿ.ಅರವಿಂದ್, ಪಾರ್ಶ್ವನಾಥ್, ಚೌಡವಳ್ಳಿ ಜಗದೀಶ್, ಶ್ರೀಕಂಠ, ಸುರೇಶ್, ಸುಬಿಯಾ ಮೆಹಕ್, ನಾದವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.