ADVERTISEMENT

ಸಮಸ್ಯೆಗಳ ಸುಳಿಯಲ್ಲಿ ದೊಂಬರಹಟ್ಟಿ ದೊಂಬಿದಾಸರು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 7:15 IST
Last Updated 13 ಏಪ್ರಿಲ್ 2011, 7:15 IST
ಸಮಸ್ಯೆಗಳ ಸುಳಿಯಲ್ಲಿ ದೊಂಬರಹಟ್ಟಿ ದೊಂಬಿದಾಸರು
ಸಮಸ್ಯೆಗಳ ಸುಳಿಯಲ್ಲಿ ದೊಂಬರಹಟ್ಟಿ ದೊಂಬಿದಾಸರು   

ಹಳೇಬೀಡು: ಅಲೆಮಾರಿಗಳು ಹಾಗೂ ಹಿಂದುಳಿದ ವಿಶಿಷ್ಟ ಜನಾಂಗ ವಾಸವಾಗಿರುವ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹಲವಾರು ಸೌಲಭ್ಯ ಕಲ್ಪಿಸಿದ್ದರೂ, ದೂರದಿಂದ ವಲಸೆ ಬಂದು ಬೇಲೂರು ತಾಲ್ಲೂಕಿನ ಗಡಿ ಭಾಗದ ಶಿವನೇನಹಳ್ಳಿ ಬಳಿ ದೊಂಬರಟ್ಟಿಯಲ್ಲಿ ನೆಲೆಸಿದ ದೊಂಬಿದಾಸರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.

ದೊಂಬರಟ್ಟಿಯ ಪೂರ್ವಿಕರು ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಡೊಳ್ಳು ಬಾರಿಸಿಕೊಂಡು ವಿಭಿನ್ನವಾದ ದೈಹಿಕ ಕಸರತ್ತು ಮಾಡಿಕೊಂಡು ಊರಿಂದ ಊರಿಗೆ ಅಲೆದಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಕೂಲಿ ಕೆಲಸ ಅರಸಿ ಕೆಲವು ಕುಟುಂಬಗಳು ಶಿವನೇನಹಳ್ಳಿ ಗ್ರಾಮದತ್ತ ಪಾದ ಬೆಳೆಸಿದವು. ಗ್ರಾಮದ ಬಳಿ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ನಾಲ್ಕಾರು ಕುಟುಂಬಗಳು ಈಗ  60 ಕುಟುಂಬಗಳಾಗಿವೆ. ಅಂದಾಜು 300 ಜನರು ಗ್ರಾಮದಲ್ಲಿ ವಾಸವಾಗಿದ್ದಾರೆ. ಹಲವು ಮಂದಿ ಭೂಮಿ ಸಂಪಾದಿಸಿಕೊಂಡು ಕೃಷಿ ಕಾಯಕ ನಡೆಸಿದರೆ, ಮತ್ತಷ್ಟು ಜನರು ಕೂಲಿ ಮಾಡುತ್ತಿದ್ದಾರೆ.

ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಕ ವೃತ್ತಿ ಮಾಡುತ್ತಿರುವ ಲೊಕೇಶ್ ಎಕೈಕ ಸರ್ಕಾರಿ ನೌಕರ. ಇತ್ತಿಚೀನ ದಿನಗಳಲ್ಲಿ ಕೆಲವು ಮಂದಿ ಡಿಇಡಿ ಹಾಗೂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮದ ಜನರಿಗೆ ಸಾಕಷ್ಟು ಆಶ್ರಯ ಮನೆಗಳು ನೀಡಲಾಗಿದೆ.  ಆದರೆ ಒಂದು ಮನೆಯಲ್ಲಿಯೂ ಶೌಚಾಲಯ ಇಲ್ಲದೆ, ನಿತ್ಯ ಕರ್ಮಗಳು ಬಯಲಿನಲ್ಲಿ ನಡೆಯುತ್ತಿದೆ. ಸ್ವಚ್ಛಗ್ರಾಮ ಯೋಜನೆ ಅಡಿಯಲ್ಲಿ ಸಹಾಯ ಧನ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಲು ಜನಪ್ರತಿನಿಧಿಗಳು ಸಹಕರಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.   

ಹಿಂದೆ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿತ್ತು 1.5 ವರ್ಷದ ಹಿಂದೆ ಶಾಸಕರ ಅನುದಾನದಲ್ಲಿ ಕೊಳವೆಬಾವಿ ನಿರ್ಮಿಸಿ ಶಿವನೇನಹಳ್ಳಿ ದೊಂಬರಟ್ಟಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಕ್ಷಾಮ ಹಾಗೂ ಪಂಚಾಯತಿ ನೌಕರರು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೆ, ಸಮೃದ್ಧ ನೀರಿದ್ದರೂ ಪರದಾಡುವಂತಾಗಿದೆ.

ಕೆಲವೆ ಮೀಟರ್‌ಗಳಷ್ಟು ಮಾತ್ರ ಚರಂಡಿಗಳು ಇರುವುದರಿಂದ ನೀರು ಊರಾಚೆ ಹೋಗದೆ ರಸ್ತೆಗಳಲ್ಲಿ ಹರಿಯುತ್ತದೆ. ಮುಖ್ಯರಸ್ತೆಯ ಚರಂಡಿಗೆ ಕಟ್ಟಡ ನಿರ್ಮಾಣ ಆಗದೆ ಇರುವುದರಿಂದ ಕೊಚ್ಚೆ ನೀರು ನಿಂತು ಸೊಳ್ಳೆಗಳ ತಾಣವಾಗಿದೆ. ಹಳೆ ಕಾಲದ ನೀರು ಸೇದುವ ಕಲ್ಲುಬಾವಿ ಸ್ಥಿತಿಗತಿ ನೋಡುವವರಿಲ್ಲದೆ ನಲುಗುತ್ತಿದೆ.

ಮತಿಘಟ್ಟದಿಂದ ಜಾವಗಲ್‌ವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ನಡೆದಿದ್ದರೂ ಗ್ರಾಮದ ಬಳಿ 600 ಮೀಟರ್ ಕಾಮಗಾರಿ ಬಾಕಿ ಉಳಿದಿದ್ದು, ಹದಗಟ್ಟೆ ರಸ್ತೆಯಲ್ಲಿ ಓಡಾಡುವಂತಾಗಿದೆ. ರಸ್ತೆ ದುಸ್ಥಿತಿಯಿಂದ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಇಲ್ಲದಂತಾಗಿದೆ. ಡೊಂಬರಟ್ಟಿಯ ಪುಟ್ಟ ಮಕ್ಕಳು ಮಕ್ಕಳು ಅರ್ಧ ಕಿ.ಮೀ. ದೂರದ ಶಿವನೇನಹಳ್ಳಿ ನಡೆದುಕೊಂಡು ಹೋಗಿ ಬರಬೇಕು. ಸರ್ಕಾರ ಪ್ರತ್ಯೇಕ ಅಂಗನವಾಡಿ ಮಂಜೂರು ಮಾಡಬೇಕು ಎಂಬುದು ಗ್ರಾಮಸ್ಥರ ಕೂಗು.

ಗ್ರಾಮದ ಸ್ಥಿತಿಗತಿ ನಿವಾರಣೆ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಮುಂಬರುವ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ. ಸದಸ್ಯರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.