ADVERTISEMENT

ಸಮಾನತೆಗೆ ಹೋರಾಟ ಅಗತ್ಯ: ರೂಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2011, 6:10 IST
Last Updated 8 ಮಾರ್ಚ್ 2011, 6:10 IST

ಹಾಸನ:‘ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆಯ ಮುಖಗಳು ಬದಲಾಗಿವೆಯೇ ವಿನಾ ಶೋಷಣೆ ನಿಂತಿಲ್ಲ. ಪುರುಷ ಪ್ರಧಾನ ಮೌಲ್ಯಗಳು, ಶೋಷಣೆ ವಿರುದ್ಧ ಹಾಗೂ ಸಮಾನ ಅವಕಾಶ ಗಳಿಗಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಸಂಘಟಿತ ಹೋರಾಟ ನಡೆಸಬೇಕಿದೆ’ ಎಂದು ಸಾಹಿತಿ ರೂಪ ಹಾಸನ ನುಡಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಎಸ್‌ಎಫ್‌ಐ ಆಯೋಜಿಸಿದ್ದ ವಿದ್ಯಾರ್ಥಿ ನಿಯರ 5 ನೇ ರಾಜ್ಯಮಟ್ಟದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸಾವಿರಾರು ವರ್ಷಗಳಿಂದ ನಿರಂತರ ಶೋಷಣೆಗೊಳಗಾಗಿ ಅವಕಾಶಗಳಿಂದ ವಂಚಿತರಾಗಿರುವ ಮಹಿಳೆಗೆ ಈಗಲೂ ಪುರುಷರಿಗೆ ಸಮಾನವಾದ ಅವಕಾಶಗಳು ಸಿಗುತ್ತಿಲ್ಲ.  ಪ್ರಸಕ್ತ ನೀಡುತ್ತಿರುವ ಶಿಕ್ಷಣದಲ್ಲಿ ಪಾಳೇಗಾರಿ, ಪುರುಷ ಪ್ರಧಾನ ವ್ಯವಸ್ಥೆಯ ಕೊಳಕು ಮೌಲ್ಯಗಳು, ಮಹಿಳೆ ಪುರುಷರಿಗೆ ಅಧೀನಳಾಗಿರಬೇಕು ಎನ್ನುವ ವಿಚಾರಗಳನ್ನೆ ಕಲಿಸಲಾಗುತ್ತಿದೆ. ವೈಚಾರಿಕತೆ, ವೈಜ್ಞಾನಿಕತೆಗೆ ತೆರೆದುಕೊಳ್ಳದ ಧರ್ಮ, ಸಿದ್ದಾಂತ ಗಳು ಪ್ರಗತಿ ವಿರೋಧಿಯಾಗುತ್ತವೆ. ಅಂತಹ ನಿಲುವುಗಳನ್ನು ಹಿಮ್ಮೆಟ್ಟಿಸಬೇಕು’ ಎಂದರು.

ಮುಖ್ಯ ಅತಿಥಿಯಾಗಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ದರ್ಶಿ ಧರ್ಮೇಶ್ ಮಾತನಾಡಿ, ‘ಶಾಲಾ - ಕಾಲೇಜುಗಳು, ಕೆಲಸದ ಸ್ಥಳಗಳಲ್ಲಿ  ಮಹಿಳೆಯರು, ವಿದ್ಯಾರ್ಥಿನಿಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ರಚಿಸುವಂತೆ ಚಳವಳಿ ಆರಂಭಿಸಬೇಕು’ ಎಂದರು. ಎಸ್.ಎಫ್.ಐ ರಾಜ್ಯ ಘಟಕದ ಅಧ್ಯಕ್ಷ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ಚಂದ್ರು, ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಅನಂತನಾಯ್ಕಿ, ಎಸ್.ಎಫ್.ಐ ವಿದ್ಯಾರ್ಥಿನಿಯರ ಉಪಸಮಿತಿ ರಾಜ್ಯ ಸಂಚಾಲಕಿ ಸೌಮ್ಯ, ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಶಾವೆಲ್ ಹಮೀದ್, ಬಿಜಿವಿಎಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಅಹಮದ್, ಎಸ್.ಎಫ್.ಐ ಜಿಲ್ಲಾ ಘಟಕದ ಅದ್ಯಕ್ಷ ಪೃಥ್ವಿ ವೇದಿಕೆಯಲ್ಲಿದ್ದರು. ವಾಸುದೇವ್ ನಿರೂಪಿಸಿದರು. ದಿವ್ಯಾ ಎ.ಎಲ್. ವಂದಿಸಿದರು. 

ಸಮಾವೇಶದಲ್ಲಿ ರಾಜ್ಯಾದ್ಯಂತ ಶಿಕ್ಷಣ- ಉದ್ಯೋಗ-ಸ್ವಾವಲಂಬಿ ಬದುಕಿಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳು ವುದು,  ಎಲ್ಲ ಶಾಲಾ, ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಗಳನ್ನು ರಚಿಸಲು ಒತ್ತಾಯಿಸುವುದು,  ಪದವಿ ಹಂತದವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಬೇಕು ಮತ್ತು ಶುಲ್ಕ ಏರಿಕೆಯನ್ನು ಕೈ ಬಿಡಬೇಕು ಎಂಬ ಒತ್ತಾಯ, ಹೆಣ್ಣು ಭ್ರೂಣ ಹತ್ಯೆ, ಆಶ್ಲೀಲ ಭಿತ್ತಿಪತ್ರ ಪ್ರದರ್ಶನ ಹಾಗೂ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯಗಳನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು. ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ಸೌಭ್ಯವನ್ನು ನೀಡಬೇಕು, ಹಾಸ್ಟೇಲ್‌ಗಳಿಗೆ ಮೂಲ ಸೌಕರ್ಯ್ನ ನೀಡಬೇಕು. ಹಾಗೂ  ಲೋಕಸಭೆಯಲ್ಲಿ ಶೇ 33 ಮಹಿಳಾ ಪ್ರಾತಿನಿಧ್ಯ ನೀಡಲು ಒತ್ತಾಯಿಸುವ ನಿರ್ಣಯ ಅಂಗೀಕರಿಸಲಾಯಿತು.

ನೂತನ ಉಪಸಮಿತಿ ಆಯ್ಕೆ:
ಸಮಾವೇಶದಲ್ಲಿ  29 ವಿದ್ಯಾರ್ಥಿನಿ ಯರ ನೂತನ ರಾಜ್ಯ ಉಪಸಮಿತಿ ಯನ್ನು ರಚಿಸಲಾಯಿತು. ಹೊಸ ಸಮಿತಿಯ ವಿವರ ಇಂತಿದೆ.ಸಂಚಾಲಕಿ - ಸೌಮ್ಯ, ಸಹಸಂಚಾಲಕಿಯರು - ರೇಖಾ (ರಾಯಚೂರು), ಜ್ಯೋತಿ (ಧಾರವಾಡ), ರೇಣುಕಾ (ಹಾವೇರಿ), ದಿವ್ಯಾ (ಹಾಸನ).

ಸಮಿತಿ ಸದ್ಯಸರು - ಶೋಭಾ, ಸವಿತಾ (ಬಳ್ಳಾರಿ), ನೀಲಾ.ಬಿ.ಎಸ್ (ಹಾವೇರಿ), ಆರತಿ (ತುಮಕೂರು), ಆಶಾ ಭಾಗವತೀ (ಗುಲ್ಬರ್ಗಾ), ನ್ಯಾಮರ್ (ಚಿಕ್ಕಬಳ್ಳಾಪುರ), ಅಂಜನಾ, ಶಿಲ್ಪಾ ಪತ್ತಾರ್ (ಕೊಪ್ಪಳ), ಮಂಜುಳ,ಎನ್ (ಮೈಸೂರು), ಸವಿತಾ (ಮಂಡ್ಯ), ವನಜಾ, ಶಾಂತಕುಮಾರಿ(ಕೋಲಾರ), ವೀಣಾ (ದ.ಕ), ಭವ್ಯ (ಉಡುಪಿ), ಫಕ್ಕೀರಮ್ಮ (ಗದಗ), ಲಕ್ಷ್ಮೀ (ರಾಯಚೂರು) ಹಾಗೂ ವನಿತಾ (ಹಾಸನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.