ADVERTISEMENT

ಸರಳ ವಿವಾಹಕ್ಕೆ ಮನಸ್ಸು ಮಾಡಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 5:55 IST
Last Updated 22 ಅಕ್ಟೋಬರ್ 2011, 5:55 IST

ಅರಸೀಕೆರೆ: ದುಂದು ವೆಚ್ಚದ ಮದುವೆ ಮಾಡಿ ನರಳುವುದಕ್ಕಿಂತ ಸರಳ ಹಾಗೂ ಸಾಮೂಹಿಕ ಮದುವೆ ಮಾಡುವುದು ಒಳಿತು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಶುಕ್ರವಾರ ತಿಳಿಸಿದರು.

ಅರಸೀಕೆರೆ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಭಕ್ತ ಮಂಡಳಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ,  ಶ್ರೆಮಂತರಾಗಲಿ ಅಥವಾ ಬಡವರಾಗಲಿ ಆಡಂಬರದ ಮದುವೆ ಮಾಡಿ ಜೀವನದ ಉದ್ದಕೂ ಸಾಲದ ಕೂಪದಲ್ಲಿ ಸಿಲುಕಿ ಒದ್ದಾಡುವುದಕ್ಕಿಂತಲೂ ಜೀವನಕ್ಕೆ ಹೊರೆಯಾಗದಿರುವ ಸರಳ ಹಾಗೂ ಸಾಮೂಹಿಕ ವಿವಾಹಕ್ಕೆ ಮನಸ್ಸು ಮಾಡುವಂತಹ ವಾತಾವರಣ ನಿರ್ಮಾಣವಾಗಲಿ ಎಂದರು.

ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ದುಂದು ವೆಚ್ಚದ ಮದುವೆಗಳಿಗಿಂತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ದೀಕ್ಷೆ ಪಡೆಯುವುದು ಹೆಚ್ಚು ಮೌಲ್ಯಯುತವಾದದ್ದು ಎಂದು ಹೇಳಿದರು.

ಪ್ರಸನ್ನ ಗಣಪತಿ ಟ್ರಸ್ಟ್ ಗೌರವಾಧ್ಯಕ್ಷ ಜೆ.ಪಿ. ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿಯೇ ತುಂಬಾ ಹೆಸರುವಾಸಿಯಾಗಿದ್ದ ಅರಸೀಕೆರೆ ಗಣೇಶೋತ್ಸವ ಇಂದು ದಿನಕಳೆದಂತೆ ತನ್ನ ಹಿರಿಮೆ, ಗರಿಮೆ ಹಾಗೂ ಮೆರಗು ಕಳೆದುಕೊಂಡಿದ್ದು, ಮತ್ತೆ ತನ್ನ ಹಿಂದಿನ ವೈಭವ ಮರುಕಳಿಸುವ ನಿಟ್ಟಿನಲ್ಲಿ ಭಕ್ತ ಮಂಡಳಿಯವ ರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಮನರಂಜನಾ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.

ಮಾಜಿ ಶಾಸಕ ಎ.ಎಸ್.ಬಸವರಾಜು, ಪುರಸಭಾ ಮಾಜಿ ಅಧ್ಯಕ್ಷ ಕೆ.ಎನ್. ದುರ್ಗಪ್ಪಶೆಟ್ಟಿ, ಮಾಂಗಲ್ಯ ದಾನಿಗಳಾದ ಬಸವೇಶ್ವರ ಜ್ಯೂಯಲರ್ಸ್‌ ಮಾಲೀಕರಾ ದ ಕೆ.ಜಿ. ಗೋಪಾಲಕೃಷ್ಣ ರಾಯ್ಕರ್,ವಿ.ಎಸ್.ಎನ್ ಮಾಲೀಕರು, ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಎಸ್.ಎನ್. ಸುಬ್ಬಣ್ಣ, ಉಪಾಧ್ಯಕ್ಷ ಶಾಂತವೀರಯ್ಯ ಉಪಸ್ಥಿತರಿದ್ದರು.

ಅನ್ನ ಸಂತರ್ಪಣೆ: ಸಾಮೂಹಿಕ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಭಕ್ತರು ಹಾಗೂ ವಧು-ವರರ ಬಂಧು ವರ್ಗದವರಿಗೆ ಭಕ್ತ ಮಂಡಳಿ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ದಾಸೋಹ ವ್ಯವಸ್ಥೆಗೆ ಹಾಸನ ಕೆ.ಎಂ.ಎಫ್ ಘಟಕದ ವತಿಯಿಂದ 3000 ಪ್ಯಾಕೆಟ್ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.