ADVERTISEMENT

ಸಾವಯವ ಗೊಬ್ಬರ ಬಳಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 6:22 IST
Last Updated 22 ಜುಲೈ 2013, 6:22 IST

ಹಳೇಬೀಡು: ಅತಿಯಾದ ರಾಸಾಯ ನಿಕಗಳ ಬಳಕೆಯಿಂದ ಸಾವಯವ ಅಂಶ ಕಡಿಮೆಯಾಗಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ರೈತರು ತಮ್ಮ ಜಮೀನುಗಳಿಗೆ ಸಾವಯವ ಗೊಬ್ಬರ ನೀಡಬೇಕು ಎಂದು ಮಣ್ಣು ವಿಜ್ಞಾನ ವಿಷಯ ತಜ್ಞ ಚನ್ನಕೇಶವ ತಿಳಿಸಿದರು.

ಪಟ್ಟಣದ ಕಲ್ಪತರು ಶಾಲೆಯಲ್ಲಿ ಭಾನುವಾರ ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ಬೀಜೋಪಚಾರ ಆಂದೋಲನ ಹಾಗೂ ಭೂಚೇತನ ಯೋಜನೆ ಅಡಿಯಲ್ಲಿ ರೈತರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕೃಷಿ ತಜ್ಞರ ಸಹೆಯಂತೆ ಬೆಳೆಯ ಬೆಳವಣಿಗೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರವನ್ನು ನೀಡಬೇಕು. ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಿ ಭೂಮಿಗೆ ಅಗತ್ಯವಿರುವ ಪೋಷಾಕಾಂಶಗಳನ್ನು ನೀಡಬೇಕು. ರೋಗ ಹಾಗೂ ಕೀಟ ಬಾಧೆ ನಿಯಂತ್ರಣ ಮಾಡವುದಕ್ಕೂ ಅಗತ್ಯ ಔಷಧವನ್ನು ಮಾತ್ರ ಸಿಂಪಡಣೆ ಮಾಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ನಾಗೇಂದ್ರ ಪ್ರಸಾದ್ ಮಾತನಾಡಿ. ರೈತರು ಬಿತ್ತನೆಗೆ ಮೊದಲು ಬೀಜೋಪಚಾರ ಮಾಡುವುದರಿಂದ ರೋಗಗಳನ್ನು ನಿಯಂತ್ರಿಸಬಹುದು. ಮೊಳಕೆ  ಹಂತದಲ್ಲಿ ಮಣ್ಣಿನಿಂದ ಬೆಳೆಗೆ ಹರಡುವ ರೋಗ ಹತೋಟಿ ಮಾಡಬಹುದು ಎಂದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಡಿ.ಪಿ. ಜಯರಾಂ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಸ್ಯ ಸಂರಕ್ಷಣ ತಜ್ಞ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಳಿನ ಶಿವಕುಮಾರ್, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತ, ನೇತ್ರಾವತಿ, ಅನ್ನಪೂರ್ಣ, ತಿಮ್ಮೇಗೌಡ, ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ. ಕುಮಾರ್, ಹೋಬಳಿ ಅಧ್ಯಕ್ಷ ಚನ್ನೇಗೌಡ, ಗೌರವ ಅಧ್ಯಕ್ಷ ಗಡಿ ಮಲ್ಲಿಕಾರ್ಜುನ, ಕೃಷಿ ಅಧಿಕಾರಿ ನಾಗರಾಜು, ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಸುರೇಶ್ ಇದ್ದರು. ಬೀಜೋಪಚಾರದ ಪ್ರಾತ್ಯಕ್ಷಿಕೆ ಮುಖಾಂತರ ರೈತರಿಗೆ ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.