ADVERTISEMENT

ಸುಪ್ರೀಂ ತೀರ್ಪು ವಿರೋಧಿಸಿ ಪ್ರತಿಭಟನೆ

ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 8:46 IST
Last Updated 6 ಏಪ್ರಿಲ್ 2018, 8:46 IST

ಹಾಸನ: ಪರಿಶಿಷ್ಟ ಜಾತಿ, ವರ್ಗದ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಬೇಕೆಂದು ಆಗ್ರಹಿಸಿ ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ದಲಿತ ಸಂಘರ್ಷ ಸಮಿತಿ, ಬಹುಜನ ಸಮಾಜ ಪಕ್ಷ, ಸಿಐಟಿಯು ಕಾರ್ಯಕರ್ತರು ಎನ್.ಆರ್.ವೃತ್ತದ ಮೂಲಕ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ಪರಿಶಿಷ್ಟ ಜಾತಿ, ವರ್ಗದ ದೌರ್ಜನ್ಯ ತಡೆ ಕಾಯ್ದೆ 1989ನ್ನು ಕುಗ್ಗಿಸುವ ತೀರ್ಪನ್ನು ಸುಪ್ರೀಂ ನೀಡಿದೆ. ಇದರಿಂದ ಜಾತಿ ತಾರತಮ್ಯ, ದಬ್ಬಾಳಿಕೆ, ದೌರ್ಜನ್ಯ ನಡೆಸುವ ಜಾತಿವಾದಿ ಶಕ್ತಿಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾಗಿದೆ. ಈ ತೀರ್ಪು ದಲಿತರಿಗೆ ಬಗೆದಿರುವ ದ್ರೋಹ’ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ದಲಿತರ ಕೊಲೆ, ದೌರ್ಜನ್ಯ, ಅತ್ಯಾಚಾರ ತಡೆಗಟ್ಟಲು ದೌರ್ಜನ್ಯ ತಡೆ ಕಾಯ್ದೆಯನ್ನು ಇನ್ನಷ್ಟು ಬಲಿಷ್ಟಗೊಳಿಸಿ ದಲಿತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ದಲಿತ ಮುಖಂಡರಾದ ನಾರಾಯಣದಾಸ್, ಎಚ್.ಕೆ.ಸಂದೇಶ್, ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಚಾಲಕ ನಾಗರಾಜ್ ಹೆತ್ತೂರು, ಬಿಎಸ್‌ಪಿ ಯ ಗಂಗಾಧರ್ ಬಹುಜನ್, ಮುಖಂಡರಾದ ಎಸ್.ಎನ್‌. ಮಲ್ಲಪ್ಪ, ಅಬುಂಗ ಮಲ್ಲೇಶ್, ಕೆ.ಎಸ್. ಮಂಜುನಾಥ್‌, ಎಂ.ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.