ADVERTISEMENT

ಸೋಲಾಪುರ – ಹಾಸನ ರೈಲಿಗೆ ಸ್ವಾಗತ 

ಶ್ರವಣಬೆಳಗೊಳದಲ್ಲಿ ಚಾಲಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:21 IST
Last Updated 15 ಜೂನ್ 2018, 12:21 IST

ಶ್ರವಣಬೆಳಗೊಳ: ಸೋಲಾಪುರದಿಂದ ಯಶವಂತಪುರ ಮಾರ್ಗವಾಗಿ ನೂತನವಾಗಿ ಇಲ್ಲಿಗೆ ಬರುವ ನೂತನ ಎಕ್ಸ್‌ಪ್ರೆಸ್ ರೈಲಿಗೆ ಶ್ರವಣಬೆಳಗೊಳದ ರೈಲ್ವೆ ನಿಲ್ದಾಣದಲ್ಲಿ ಕ್ಷೇತ್ರದ ಸ್ವಾಗತ ಕೋರಲಾಯಿತು.

ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಶಾಸಕ ಸಿ.ಎನ್‌.ಬಾಲಕೃಷ್ಣ ಅಕ್ಷತೆ ಹಾಕುವುದರೊಂದಿಗೆ ಗುರುವಾರ ಸ್ವಾಗತ ಕೋರಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಅವರು, ‘ಸ್ವಾಮೀಜಿಯವರ ಆಶೀರ್ವಾದ ಹಾಗೂ ಸಂಸದ ದೇವೇಗೌಡರ ಪರಿಶ್ರಮದಿಂದ ರೈಲು ಸಂಚಾರ ಸೌಲಭ್ಯ ಲಭಿಸಿದ್ದು, ಪ್ರವಾಸೋದ್ಯಮಕ್ಕೆ ನೆರವಾಗಲಿದೆ’ ಎಂದರು.

ADVERTISEMENT

ಶ್ರವಣಬೆಳಗೊಳ ಹಾಗೂ ಹಾಸನ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬರುವವರಿಗೆ ಇದರಿಂದ ಅನುಕೂಲ. ಚನ್ನರಾಯಪಟ್ಟಣದಲ್ಲಿ ಇದಕ್ಕೆ ನಿಲುಗಡೆ ನೀಡಬೇಕು ಎಂದು ಪ್ರತಿಪಾದಿಸದಿರು.

ಸೋಲಾಪುರದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲನ್ನು ಜೂನ್ 14ರಿಂದ ಹಾಸನದವರೆಗೆ ವಿಸ್ತರಿಸಲಾಗಿದೆ, ಪ್ರತಿದಿನ ಬೆಳಿಗ್ಗೆ ಯಶವಂತಪುರದಿಂದ 7.40ಕ್ಕೆ ಬಿಡುವ ರೈಲು, ಶ್ರವಣಬೆಳಗೊಳಕ್ಕೆ 9.55ಕ್ಕೆ ತಲುಪಲಿದೆ. ಹಾಸನ ನಿಲ್ದಾಣಕ್ಕೆ 11.25 ಕ್ಕೆ ತಲುಪಲಿದೆ.

ಹಾಸನ ನಿಲ್ದಾಣದಿಂದ ಸಂಜೆ 4.10ಕ್ಕೆ ಬಿಡಲಿದ್ದು, ಶ್ರವಣಬೆಳಗೊಳ ನಿಲ್ದಾಣಕ್ಕೆ ಸಂಜೆ 4.51 ಬರಲಿದೆ. ನಂತರ ಯಶವಂತಪುರ ನಿಲ್ದಾಣಕ್ಕೆ ರಾತ್ರಿ 8.10ಕ್ಕೆ ತಲುಪಲಿದೆ. ಅಲ್ಲಿಂದ ಮರುದಿನ ಬೆಳಿಗ್ಗೆ 8.40ಕ್ಕೆ ಸೊಲ್ಹಾಪುರ ತಲುಪಲಿದೆ.

ಈ ರೈಲಿನ ಸಂಚಾರದಿಂದ ರಾಯಚೂರು, ಮಂತ್ರಾಲಯ, ಕಲಬುರ್ಗಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲು ಶ್ರವಣಬೆಳಗೊಳದ ನಿಲ್ದಾಣಕ್ಕೆ ಬಂದಂತೆ ವಾದ್ಯ, ಪೂರ್ಣಕುಂಭಗಳಿಂದ ಸ್ವಾಗತಿಸಲಾಯಿತು. ನಂತರ ರೈಲು ಚಾಲಕರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್, ಎಪಿಎಂಸಿ ಸದಸ್ಯೆ ಶಿಲ್ಪಾ ಶ್ರೀನಿವಾಸ್, ಸ್ಟೇಷನ್ ಮಾಸ್ಟರ್ ಸರವಣ, ಪ್ರಸನ್ನಕುಮಾರ್, ಮುಖಂಡರಾದ ಪರಮ ದೇವರಾಜೇಗೌಡ, ಕಬ್ಬಾಳು ರಮೇಶ್, ಪಿ.ಕೆ.ಮಂಜೇಗೌಡ, ಎಸ್.ಎಂ.ಲಕ್ಷ್ಮಣ್, ಎ.ಆರ್.ಶಿವರಾಜು, ರವಿ ನಂಜಪ್ಪ, ಎಸ್‌.ಬಿ.ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.