ADVERTISEMENT

ಹಂಗರ ಮಲ್ಲೇಶ್ವರನ ಸಂಭ್ರಮದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2011, 10:50 IST
Last Updated 11 ನವೆಂಬರ್ 2011, 10:50 IST
ಹಂಗರ ಮಲ್ಲೇಶ್ವರನ ಸಂಭ್ರಮದ ಜಾತ್ರೆ
ಹಂಗರ ಮಲ್ಲೇಶ್ವರನ ಸಂಭ್ರಮದ ಜಾತ್ರೆ   

ಹೊಳೆನರಸೀಪುರ: ಹಸು ಕರು ಹಾಕಲಿಲ್ಲ. ಕರು ಹಾಕಿದ ನಂತರ ಹಾಲು ಕೊಡುತ್ತಿಲ್ಲ. ಕೊಟ್ಟಹಾಲು ನೀರಿನಂತೆ ತೆಳುವಾಗಿದೆ. ಗಟ್ಟಿಯಾಗಿಲ್ಲ. ಇಂತಹ ಸಮಸ್ಯೆಗಳನ್ನು ತಾಲ್ಲೂಕಿನ ಕಾಳೇನಹಳ್ಳಿ ಎ ಕಾವಲು ಸಮೀಪದ ಬೆಟ್ಟದ ಮೇಲಿರುವ ಹಂಗರ ಮಲ್ಲೇಶ್ವರ ನಿಗೆ ಗಿಣ್ಣಿನ ನೈವೇದ್ಯ ಮಾಡಿದರೆ ಪರಿಹರಿಸುತ್ತಾನಂತೆ.

ಹೀಗೆಂದು ಸುತ್ತಲ ಹತ್ತಾರು ಗ್ರಾಮಗಳ ಜನರ ನಂಬಿಕೆ. ಈ ನಂಬಿಕೆ ಇರುವುದರಿಂದ ಸುತ್ತಲ ಗ್ರಾಮಗಳಲ್ಲಿ ಯಾವುದೇ ಹಸು ಕರುಹಾಕಿದರೆ ಅದರ ಹಾಲಿನಿಂದ ಗಿಣ್ಣುಮಾಡಿ ಜನರು ಹರಕೆ ತೀರಿಸುತ್ತಾರೆ. ವರ್ಷದ 365 ದಿನವೂ ಈ ದೇವಾಲಯಕ್ಕೆ ಹತ್ತಾರು ಜನರು ಹಾಲು, ಗಿಣ್ಣಿನೊಂದಿಗೆ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಾರಂತೆ. ಈ ದೇವಾ ಲಯದಲ್ಲಿ ಅರ್ಚಕರಿಲ್ಲ. ದೇವಾಲಯಕ್ಕೆ ಬರುವವರೇ ಪೂಜೆ ಮಾಡಿಕೊಂಡು ಹೋಗುತ್ತಾರೆ. ಈ ಹಂಗರ ಮಲ್ಲೇಶ್ವ ರನ ಜಾತ್ರೆ ಗುರುವಾರ ನಡೆಯಿತು.

ಸುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಜನರು ಜಾತ್ರೆ ದಿನ ಇಲ್ಲಿಗೆ ಬಂದು ಹರಕೆ ತೀರಿಸಿ ಒಟ್ಟಾಗಿ ಕುಳಿತು ಊಟ ಮಾಡಿದರು. ಈ ದೇವಾಲಯ ನೂರಾರು ವರ್ಷಗಳ ಹಿಂದಿನಿಂದಲೂ ಇದೆ. ಅಂದಿನಿಂದಲೂ ನಮಗೆ ಯಾವುದೇ ಸಮಸ್ಯೆ ಬಂದರೂ ಇಲ್ಲಿಗೆ ಬಂದು ಹರಸಿಕೊಳ್ಳುತ್ತೇವೆ ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತಾರೆ ಹೂವಿನಹಳ್ಳಿ ರುದ್ರಮೂರ್ತಿ.

ಇಲ್ಲಿಗೆ ಜನರು ಹೆಚ್ಚಾಗಿ ಬರುತ್ತಿದ್ದರು. ನಾವೆಲ್ಲಾ ಸೇರಿ ಈ ದೇವರ ಜಾತ್ರೆ ಮಾಡಿದರೆ ಹೇಗೆ ಎನ್ನುವ ಯೋಚನೆ ನಮಗೆಲ್ಲರಿಗೂ ಬಂತು ಕಳೆದ ಮೂರು ವರ್ಷಗಳಿಮದ ಇಲ್ಲಿ ಜಾತ್ರೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಬೀಚೇನಹಳ್ಳಿ ಬಸವರಾಜು.

ಇಲ್ಲಿಗೆ ರಸ್ತೆ ಇಲ್ಲದೆ ಸುತ್ತಲ ಗ್ರಾಮಸ್ಥರೇ ಬೆಟ್ಟ ಕಡಿದು ಕಲ್ಲು ದಾರಿಯನ್ನು ನಿರ್ಮಿಸಿಕೊಂಡಿದ್ದಾರೆ. ವಾಹನಗಳು ಕಷ್ಟ ಪಟ್ಟು ಬೆಟ್ಟ ಹತ್ತುವ ಪರಿಸ್ಥಿತಿ ಇದೆ. ಆದರೂ ಜಾತ್ರೆ ದಿನ ಬೆಟ್ಟದ ಮೇಲೆ ನೂರಾರು ವಾಹನ ಗಳಿದ್ದವು.

ಮಲ್ಲೇಶಪ್ಪ, ಸೋಮಪ್ಪಾಜಿ, ನಂಜುಡಪ್ಪ, ಸಿದ್ದಪ್ಪ, ಅರುಣ್‌ವಿರುಪಾಕ್ಷ ಜಾತ್ರೆ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕ ಎಚ್.ಡಿ. ರೇವಣ್ಣ, ಕೆ.ಆರ್. ಪೇಟೆ ತಾಲ್ಲೂಕು ಗವಿ ಮಠದ ಸ್ವತಂತ್ರ ಬಸವ ಲಿಂಗ ಶಿವಯೋಗಿ ಸ್ವಾಮೀಜಿ ದೇವಾಲ ಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.