ADVERTISEMENT

ಹಣ ನೀಡದ್ದಕ್ಕೆ ಹಾವು ಕಚ್ಚಿಸಿದ ಹಾವಾಡಿಗ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 7:46 IST
Last Updated 3 ಜುಲೈ 2013, 7:46 IST

ಹಾಸನ: ಹಾವಿನ ಕೇಶವ ಆಡಿಸುತ್ತಿದ್ದ ಹಾವೊಂದು ಚನ್ನರಾಯಪಟ್ಟಣ ಮೂಲದ ಯಾಸೀನ್ ಎಂಬುವವರನ್ನು ಕಚ್ಚಿ, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ಹಾಸನದಲ್ಲಿ ನಡೆದಿದೆ.

ತನ್ನ ಕಾರಿನಲ್ಲೇ ಕೆಲವು ಹಾವು ಗಳನ್ನಿಟ್ಟುಕೊಂಡು ಅಲ್ಲಿ ಇಲ್ಲಿ ಅವುಗಳನ್ನು ಆಟವಾಡಿಸಿ, ಪ್ರದರ್ಶಿಸಿ ಹಣ ಸಂಪಾದನೆ ಮಾಡುತ್ತಿದ್ದ ಕೇಶವ, ಮಂಗಳವಾರ ಸಂಜೆ ನಗರದ ಸರ್ಕಾರಿ ಆಸ್ಪತ್ರೆ ಮುಂದೆ ಈ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲವು ಜನರೂ ಸೇರಿದ್ದರು. ಈ ಸಂದರ್ಭದಲ್ಲಿ ಯಾಸೀನ್ (25) ಅಲ್ಲಿಗೆ ಬಂದಿದ್ದರು. ಹಾವುಗಳನ್ನು ನೋಡಿದ ಬಳಿಕ ಕೇಶವನಿಗೆ ಹಣ ನೀಡಲು ನಿರಾಕರಿಸಿದಾಗ ಕೇಶವ ಹಾವೊಂದನ್ನು ಯಾಸೀನ್ ಸಮೀಪಕ್ಕೆ ತಂದಿದ್ದರು. ಹೆದರಿದ ಯಾಸಿನ್, `ಹಾವಿನಲ್ಲಿ ವಿಷ ಇದೆಯಾ?' ಎಂದು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಕೇಶವ, `ನೀನೇ ನೋಡಿಕೋ' ಎಂದು ಹಾವನ್ನು ಯಾಸೀನ್ ಮೈಮೇಲೆ ಎಸೆದರು.

ಈ ಸಂದರ್ಭದಲ್ಲಿ ಹಾವು  ಯಾಸೀನ್ ಗದ್ದಕ್ಕೆ ಕಚ್ಚಿತು ಎಂದು ಯಾಸೀನ್ ಕಡೆಯವರು ತಿಳಿಸಿದ್ದಾರೆ.
ಯಾಸೀನ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಕೇಶವ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಆದರೆ ನಗರ ಠಾಣೆ ಪೊಲೀಸರು ಅವರನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.