ADVERTISEMENT

ಹೊಯ್ಸಳ ಉತ್ಸವಕ್ಕೆ ಬಾಲಗ್ರಹ!

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 10:20 IST
Last Updated 2 ಫೆಬ್ರುವರಿ 2011, 10:20 IST

ಹಳೇಬೀಡು: ರಾಜ್ಯದಲ್ಲೆಗ ಉತ್ಸವಗಳ ಭರಾಟೆ. ಹಂಪಿ ಉತ್ಸವ ಒಂದಿಷ್ಟು ಕಳೆಕಟ್ಟಿತ್ತು. ಮಂಡ್ಯದಲ್ಲಿ ಗಗನಚುಕ್ಕಿ-ಭರಚುಕ್ಕಿ ಜಲಪಾತೋತ್ಸವ ಕಳೆದ ಉತ್ಸವ ಮುದ ನೀಡಿತ್ತು. ಇದರ ಬೆನ್ನಲ್ಲೇ ಸಾಹಿತ್ಯ ಉತ್ಸವ ರಂಗೇರಲು ಸಜ್ಜಾಗಿದೆ. ಆದರೆ, ಹಾಸನದಲ್ಲಿ ಮಾತ್ರ ಹೋಯ್ಸಳ ಉತ್ಸವಕ್ಕೆ ಗರಬಡಿದಿದೆ. ಏಳು ವರ್ಷಗಳ ಹಿಂದೆ ನಡೆದಿದ್ದ ಹೊಯ್ಸಳ ಉತ್ಸವ ಎಂದು ಎಂಬುದು ಇಲ್ಲಿನ ಜನರ ಪ್ರಶ್ನೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕಳೆಕಟ್ಟಬೇಕಿದ್ದ ಉತ್ಸವ ಚಾಲನೆಗೆ ಮುನ್ನುಡಿ ಬರೆಯುವವರೇ ಇಲ್ಲವಾಗಿದೆ.

ಪುಷ್ಪಗಿರಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಾಲಕ್ರಮೇಣ ಮೊದಲ ಎರಡು ದಿನದ ಕಾರ್ಯಕ್ರಮ ಪುಷ್ಪಗಿರಿಯಲ್ಲಿ ನಡೆದು ನಂತರ ಹಾಸನ ಜಿಲ್ಲಾ ಕೇಂದ್ರ, ಶ್ರವಣಬೆಳಗೂಳ, ಬೇಲೂರಿನಲ್ಲಿಯೂ ವೈಭವದ ಉತ್ಸವ ನಡೆಯುತ್ತಿತ್ತು. ಸರ್ಕಾರವೇ ಆರಂಭಿಸಿದ ಹೊಯ್ಸಳ ರಾಜಮನೆತನದ ವೈಭವ ನೆನಪುಮಾಡುವ ಕಾರ್ಯಕ್ರಮ ಈಗ ಸರ್ಕಾರದಿಂದಲೇ ಮರೆಯಾಗುತ್ತಿದೆ. ಯಾವ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದರೂ ಜಿಲ್ಲಾ ಸಚಿವರು ಈ ವರ್ಷ ಉತ್ಸವ ನಡೆಸುತ್ತೇವೆ ಎನ್ನುತ್ತಾರೆ. ಹೇಳಿದ ಮಾತುಗಳು ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ.

ಹಳೇಬೀಡಿನ ಪುಷ್ಪಗಿರಿಯಲ್ಲಿ ಉತ್ಸವಕ್ಕಾಗಿಯೇ ನಿರ್ಮಾಣ ಮಾಡಿರುವ ಬೃಹತ್ ಕಲಾವೇದಿಕೆ ಪಾಳುಬಿದ್ದು ಅವನತಿಯ ಹಾದಿ ಹಿಡಿದಿವೆ. ಮಹಿಳೆ, ಪುರುಷರಿಗೆ ಪ್ರತ್ಯೇಕ ಪ್ರಸಾದನ ಕೊಠಡಿ, ಶೌಚಾಲಯ ಮೊದಲಾದ ಸೌಲಭ್ಯ ಹೊಂದಿರುವ ರಂಗ ಕಟ್ಟಡದ ಬಾಗಿಲುಗಳು ತೆರದ ಸ್ಥಿತಿಯಲ್ಲಿದ್ದು, ಪ್ರಾಣಿಗಳು ವಾಸ ಮಾಡುವಂತಹ ಸ್ಥಳದಂತಾಗಿದೆ. ಕಟ್ಟಡದ ಸ್ಥಿತಿಗತಿ ತಿರುಗಿ ನೋಡುವವರು ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.