ADVERTISEMENT

102 ಮಂದಿ ಬೌದ್ಧ ಧರ್ಮಕ್ಕೆ ಸೇರ್ಪಡೆ

ಗೊರೂರಿನಲ್ಲಿ ಬೌದ್ಧ ವಿಹಾರ ಕಟ್ಟುವವರೆಗೂ ಹೋರಾಟ; ಎ.ಮಂಜು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 12:58 IST
Last Updated 17 ಜನವರಿ 2021, 12:58 IST
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭವನ್ನು ಬಿಜೆಪಿ ಮುಖಂಡ ಎ.ಮಂಜು ಉದ್ಘಾಟಿಸಿದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಧಮ್ಮ ದೀಕ್ಷಾ ಸಮಾರಂಭವನ್ನು ಬಿಜೆಪಿ ಮುಖಂಡ ಎ.ಮಂಜು ಉದ್ಘಾಟಿಸಿದರು.   

ಹಾಸನ: ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ಆರ್‌ಪಿಐ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಧಮ್ಮ ದೀಕ್ಷಾ ಸಮಾರಂಭದಲ್ಲಿ 102 ಜನ ಬೌದ್ಧ ಧಮ್ಮ ದೀಕ್ಷೆ ಪಡೆದರು.

ಬೆಂಗಳೂರಿನ ನಾಗಸೇನಾ ಬುದ್ಧವಿಹಾರದ ಭಿಕ್ಕುಣಿ ಬುದ್ಧಮ್ಮ, ಧಮ್ಮಚಾರಿ ಡಾ.ಎಚ್‌.ಆರ್‌.ಸುರೇಂದ್ರ ಹಾಗೂ ಜ್ಞಾನ ಲೋಕ ಬಂತೇಜಿ ಅವರು ಪಂಚಶೀಲ ತತ್ವ ಬೋಧಿಸುವ ಮೂಲಕ ದೀಕ್ಷೆ ನೀಡಿದರು. ಎಚ್‌.ಆರ್‌. ಸುರೇಂದ್ರ ಅವರು ಬೌದ್ಧ ಧರ್ಮದ 22 ಸೂತ್ರಗಳನ್ನು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಮುಖಂಡ ಎ. ಮಂಜು, ‘ಗೊರೂರಿನ ಹೇಮಾವತಿ ಜಲಾಶಯದ ಬಳಿ ಬುದ್ಧ ವಿಹಾರ ನಿರ್ಮಾಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ 8 ಎಕರೆ ಜಮೀನು ಮೀಸಲಿರಿಸಲಾಗಿದೆ. ನಂತರ ನಡೆದ ಬೆಳವಣಿಗೆಗಳು ಏನು ಎಂಬುದು ಜಿಲ್ಲೆಯ ಜನರಿಗೆ ಗೊತ್ತು. ರಾಜಕೀಯ ಕಾರಣಗಳಿಂದ ಆ ಕಾರ್ಯ ನೆನಗುದಿಗೆ ಬಿದ್ದಿದೆ’ ಎಂದು ಹೇಳಿದರು.

ADVERTISEMENT

‘ಗೊರೂರಿನಲ್ಲಿ ಬುದ್ಧ ವಿಹಾರ ಕಟ್ಟಿಯೇ ತೀರುತ್ತೇನೆ. ಬೆಂಗಳೂರುವರೆಗೆ ಜಾಥಾ ನಡೆಸುವ ಅನಿವಾರ್ಯತೆ ಬಂದರೆ ಎಲ್ಲರೂ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಗೊರೂರಿನಲ್ಲಿ ಬುದ್ಧ ವಿಹಾರ ನಿರ್ಮಾಣ ಮಾಡಿ ಅದನ್ನು ಪ್ರವಾಸಿ ತಾಣ ಮಾಡಬೇಕೆಂಬ ಕನಸು ಈಡೇರಬೇಕು’ಎಂದು ತಿಳಿಸಿದರು.

‘ನಾನು ಬಿಜೆಪಿ ಸೇರ್ಪಡೆಯಾಗಿರುವುದು ಜಿಲ್ಲೆಯ ಬಹುತೇಕರಿಗೆ ಇಷ್ಟ ಇಲ್ಲ. ನಾಯಕನಾದವನು ನೊಂದವರ, ಬಡವರ, ಶೋಷಣೆಗೆ ಒಳಗಾದವರ ಪರವಾಗಿ ಇರಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ 6.35 ಲಕ್ಷ ಮತ ನೀಡಿದ್ದಾರೆ. ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ’ ಎಂದರು.

ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡಿ, ದೇಶದಲ್ಲಿ ಇಂದು ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡಬೇಕಾದ ಸ್ಥಿತಿ ಬಂದಿದೆ. ಅಲ್ಲದೇ ರಾಜ್ಯದಲ್ಲಿ ಬೌದ್ಧರ ಜನ ಸಂಖ್ಯೆ ಅನೇಕ ಕಾರಣಗಳಿಂದಾಗಿ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಿಡಿಸದರು.

2021-22ರ ಜನಗಣತಿ ವೇಳೆಗೆ ಬೌದ್ಧರ ಜನಸಂಖ್ಯೆ ಏರಿಕೆಯಾಗಬೇಕು. ಅ. 14ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಕನಿಷ್ಠ 50 ಸಾವಿರ ಮಂದಿ ಭಾಗವಹಿಸಬೇಕು. ದೇಶ, ವಿದೇಶಗಳ ಬೌದ್ಧ ಬಿಕ್ಕುಗಳು ಭಾಗವಹಿಸುವರು ಎಂದು ತಿಳಿಸಿದರು.

ಗಣ್ಯರು ಮಹಾನಾಯಕ ಕ್ಯಾಲೆಂಡರ್‌ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆರ್‌.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌.ಕೆ. ಸಂದೇಶ್‌, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ ಮಹಾಂತಪ್ಪ, ಉಪನ್ಯಾಸಕ ಡಿ.ಕೆ. ಕುಮಾರಯ್ಯ, ಪಿಳ್ಳರಾಜು ಬೋಸಪ್ಪ, ಅತ್ನಿ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.