ADVERTISEMENT

ಹಾಸನಕ್ಕೆ ಬಂತು 10,500 ಕೋವಿಶೀಲ್ಡ್‌ ಲಸಿಕೆ

16ರಿಂದ ಲಸಿಕಾ ಅಭಿಯಾನಕ್ಕೆ ಚಾಲನೆ: ಡಿಎಚ್‌ಒ ಡಾ. ಸತೀಶ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 12:40 IST
Last Updated 14 ಜನವರಿ 2021, 12:40 IST
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಕೋವಿಶೀಲ್ಡ್‌ ಲಸಿಕೆ ತರಲಾಯಿತು.
ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಕೋವಿಶೀಲ್ಡ್‌ ಲಸಿಕೆ ತರಲಾಯಿತು.   

ಹಾಸನ: ಮೊದಲ ಹಂತದ ಕೋವಿಡ್ ಲಸಿಕೆ ‘ಕೋವಿಶೀಲ್ಡ್‌’ ಗುರುವಾರ ಸಂಜೆ ಹಾಸನ ತಲುಪಿತು.

ಮೈಸೂರು ವಿಭಾಗದಿಂದ ಬಂದ ವಾಹನದಲ್ಲಿ ತರಲಾದ 10,500 ಕೋವಿಶೀಲ್ಡ್‌ ಲಸಿಕೆಯ ಬಾಕ್ಸ್‌ಗಳನ್ನುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ನೆಲಮಹಡಿಯ ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗಿದೆ.

ಮೈಸೂರಿನಿಂದ ವ್ಯಾನ್‌ನಲ್ಲಿ ಪೊಲೀಸ್‌ ಭದ್ರತೆಯಲ್ಲಿ ರಸ್ತೆ ಮೂಲಕ ತರಲಾದ ಕೋವಿಶೀಲ್ಡ್‌ ಲಸಿಕೆಯನ್ನುಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸತೀಶ್‌ ಮತ್ತು ಇತರೆ ಅಧಿಕಾರಿಗಳು ಬರಮಾಡಿಕೊಂಡರು.

ADVERTISEMENT

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಾ.ಸತೀಶ್‌, ‘ಜಿಲ್ಲೆಗೆ 10,500 ಡೋಸ್‌ ಕೋವಿಶೀಲ್ಡ್‌ ಲಸಿಕೆ ಹಾಗೂ42 ಸಾವಿರ ಸಿರಿಂಜ್‌ ಮೈಸೂರು ವಿಭಾಗದಿಂದ ಬಂದಿದೆ. ಸರ್ಕಾರದ ನಿರ್ದೇಶನದಂತೆ ಈಗಾಗಲೇನೋಂದಾಯಿಸಿಕೊಂಡವರಿಗೆ ಜ.16ರಿಂದ ಲಸಿಕೆ ನೀಡಲಾಗುವುದು. ತಾಲ್ಲೂಕು ಕೇಂದ್ರಗಳು ಸೇರಿದಂತೆ ಈಗಾಗಲೇ 10 ಕೇಂದ್ರಗಳನ್ನು ಗುರುತಿಸಲಾಗಿದೆ. ಹಾಸನದ ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷ್ಣ ಆಸ್ಪತ್ರೆ ಹಾಗೂ ಹಿಮ್ಸ್‌ ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಸಿದ್ಧತೆ ಕೈಗೊಳ್ಳಲಾಗಿದೆ. ಒಂದೊಂದು ಕೇಂದ್ರದಲ್ಲಿ ತಲಾ 100 ಜನರಂತೆ ಜಿಲ್ಲೆಯಲ್ಲಿ ಒಂದು ಸಾವಿರ ಜನರಿಗೆ ಲಸಿಕೆ ನೀಡಲು ಗುರಿ ನಿಗದಿ ಮಾಡಲಾಗಿದೆ’ಎಂದರು.

ಜಿಲ್ಲೆಯಲ್ಲಿ 18,156 ಕೊರೊನಾ ಸೇನಾನಿಗಳು ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಲಸಿಕೆ ಪಡೆಯುವವರ ಮೊಬೈಲ್‌ ಸಂಖ್ಯೆಗೆ ಈಗಾಗಲೇ ಸಂದೇಶ ರವಾನೆ ಮಾಡಲಾಗಿದೆ. ಆಸ್ಪತ್ರೆಯ ಡಿ ಗ್ರೂಪ್‌ ಸೇರಿದಂತೆ ಎಲ್ಲಾ ಸಿಬ್ಬಂದಿ, ವೈದ್ಯರು, ಫಾರ್ಮಸಿಸ್ಟ್‌, ಸ್ಟಾಫ್‌ ನರ್ಸ್‌ಗಳಿಗೆ ಹಂತದಲ್ಲಿ ಲಸಿಕೆ ನೀಡಲಾಗುವುದು.ಡ್ರೈರನ್‌ ಮಾಡುವ ಮೂಲಕ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಲಸಿಕೆ ಪಡೆದವರ ಮೇಲೆ 30 ನಿಮಿಷ ನಿಗಾ ಇಡಲಾಗುವುದು. ತಲೆ ಸುತ್ತು ಅಥವಾ ತುರಿಕೆ ಉಂಟಾಗಬಹುದು. ಪ್ರತಿ ಲಸಿಕೆ ನೀಡುವ ಕೇಂದ್ರದಲ್ಲಿ 108 ಆಂಬುಲೆನ್ಸ್‌ ಜೊತೆಗೆ ತಜ್ಞರ ತಂಡ ಇರಲಿದೆ. ಎಂದರು.

ಆರ್‌.ಸಿ.ಎಚ್‌ ಅಧಿಕಾರಿ ಡಾ.ಕಾಂತರಾಜ್‌, ಮೊಸಳೆ ಹೊಸಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ತೇಜಸ್ವಿ,ಫಾರ್ಮಾಸಿಸ್ಟ್‌ಗಳಾದ ಡಾ. ಸಾಜಿಯಾ, ಡಾ.ಶ್ರೀನಿವಾಸ್‌, ನಿರ್ವಾಣಿ, ಜಗದೀಶ್‌, ಅಜಿತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.