ಹಿರೀಸಾವೆ: ಹೊನ್ನೇನಹಳ್ಳಿ ಮತ್ತು ಹಿರೀಸಾವೆಯ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ಹಬ್ಬವನ್ನು ಎರಡೂ ಗ್ರಾಮಗಳಲ್ಲಿ ವಿವಿಧ ಸಂಪ್ರದಾಯಗಳೊಂದಿಗೆ ಮಂಗಳವಾರದಿಂದ 11 ದಿನಗಳ ಕಾಲ ಆಚರಿಸಲಾಗುತ್ತಿದೆ. ಗ್ರಾಮದ ಎಲ್ಲ ಜನರು ತಮ್ಮದೇ ಆದ ಜವಾಬ್ದಾರಿಯುತ ಕೆಲಸ ನಿರ್ವಹಿಸುವ ಮೂಲಕ ‘ನಮ್ಮೂರು ಹಬ್ಬ’ದಲ್ಲಿ ಭಾಗಿಯಾಗುತ್ತಾರೆ.
ಯುಗಾದಿ ನಂತರ ಈ ಹಬ್ಬ ಆಚರಿಸುವುದು ವಾಡಿಕೆ. ಹೆಬ್ಬಾರಮ್ಮ ದೇವಸ್ಥಾನಕ್ಕೆ ಕಳೆದ ಶುಕ್ರವಾರ ಹಸಿರು ಚಪ್ಪರ ಹಾಕಿ, ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಮಂಗಳವಾರ ರಾತ್ರಿ ದೇವಸ್ಥಾನಗಳು ಮತ್ತು ಉಯ್ಯಾಲೆ ಕಂಬ, ರಂಗಮಂಟಪಕ್ಕೆ ಬಾಳೆ ಕಂಬ ಕಟ್ಟುವ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ಎರಡೂ ಗ್ರಾಮಗಳಲ್ಲಿ ಚೌಡೇಶ್ವರಿ ಮತ್ತು ಹೆಬ್ಬಾರಮ್ಮ ದೇವರ ಮೆರವಣಿಗೆ ಮಾಡುವ ಬೀದಿಗಳಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ತಿರುಗುವುದಿಲ್ಲ. ದೇವರ ಮನೆತನದವರು ಮಾಂಸಾಹಾರ, ರೊಟ್ಟಿ ಮತ್ತು ಒಗ್ಗರಣೆ ಪದಾರ್ಥಗಳನ್ನು ಮಾಡುವುದಿಲ್ಲ. ಈ ಹಬ್ಬದಲ್ಲಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ.
ಪ್ರತಿ ದಿನ ರಾತ್ರಿ ಒಂದೊಂದು ಮನೆತನದವರು ಚೌಡೇಶ್ವರಿ ದೇವಿಯ ಉತ್ಸವ ನಡೆಸುತ್ತಾರೆ. ಎರಡೂ ಗ್ರಾಮಗಳಲ್ಲಿ ಜನಪದ ಶೈಲಿಯ ರಂಗವನ್ನು ಕುಣಿಯುತ್ತಾರೆ. ಶೋಭಾನೆ ಪದಗಳನ್ನು ಹೇಳುತ್ತಾರೆ. ಜಾಗರಣೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಇಲ್ಲಿಗೆ ಬಂದು, ರಂಗ ಕುಣಿಯುವುದು ವಿಶೇಷ.
ಏ.15ರಂದು ಹೊನ್ನೇನಹಳ್ಳಿ ಗ್ರಾಮಸ್ಥರು ಮಣ್ಣಿನ ಮಡಿಕೆಯಲ್ಲಿ ಮಡೆ (ಹುಗ್ಗಿ) ತಯಾರಿಸುತ್ತಾರೆ. ಹಸಿ ಈಚಲು ಗರಿಯಿಂದ ಮಡೆ ಅನ್ನ ಬೇಯಿಸುವುದು ವಿಶೇಷ. ಅಂದು ರಾತ್ರಿ ಅಲಂಕೃತ ಮಡೆಗಳನ್ನು ಹೊತ್ತ ಭಕ್ತರು ಹೆಬ್ಬಾರಮ್ಮ ದೇವರ ಜೊತೆಯಲ್ಲಿ ಹಿರೀಸಾವೆಯಲ್ಲಿ ಮೆರವಣಿಗೆ ನಡೆಸುತ್ತಾರೆ. ಹರಕೆ ಹೊತ್ತ ಭಕ್ತರು ಉರುಳು ಸೇವೆ, ಬಾಯಿ ಬೀಗದ ಸೇವೆಗಳನ್ನು ಸಲ್ಲಿಸುತ್ತಾರೆ. ಏ.16ರಂದು ಚೌಡೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ರಾಜ್ಯದ ನಾನಾ ಭಾಗಗಳಲ್ಲಿ ಇರುವ ಭಕ್ತರು ಭಾಗವಹಿಸುತ್ತಾರೆ.
ಕುಂಬಾರರಿಂದ ಹಬ್ಬಕ್ಕೆ ವಿಶೇಷ ಮಡಿಕೆ ತಯಾರಿಕೆ ಹಸಿ ಈಚಲು ಗರಿಯಿಂದ ಮಡೆ ಅನ್ನ ಬೇಯಿಸುವ ಭಕ್ತರು ಎರಡು ಗ್ರಾಮದಲ್ಲಿ ರಂಗದ ಕುಣಿತ: ನಿತ್ಯ ಉತ್ಸವ
ಹೊನ್ನೇನಹಳ್ಳಿ ಹಿರೀಸಾವೆ ಗ್ರಾಮಸ್ಥರು ಚೌಡೇಶ್ವರಿ ದೇವಿಯ ಒಕ್ಕಲಿನವರು ಭಕ್ತಿಭಾವದಿಂದ ನಮ್ಮೂರ ಹಬ್ಬದಲ್ಲಿ ಭಾಗಿಯಾಗುತ್ತಾರೆ.ಎಚ್.ವಿ. ಫಣೀಶ್ ದೇವಸ್ಥಾನದ ಧರ್ಮದರ್ಶಿ
ವರ್ಷದಲ್ಲಿ 15 ದಿನ ಪೂಜೆ ಈ ದೇವಸ್ಥಾನದ ಬಾಗಿಲನ್ನು ಹಬ್ಬ ನಡೆಯುವ ದಿನಗಳಲ್ಲಿ ಮಾತ್ರ ತೆಗೆಯಲಾಗುತ್ತದೆ. ದೇವಿಯು ಒಂದು ದಿನ ತವರು ಮನೆಯಾದ ಹೊನ್ನೇನಹಳ್ಳಿಗೆ ಹೋಗಿ ದರ್ಶನ ನೀಡಿ ಹಿರೀಸಾವೆಗೆ ಮರಳುತ್ತಾಳೆ. ವರ್ಷದಲ್ಲಿ 15 ದಿನ ದೇವಿಗೆ ಪೂಜೆ ಸಲ್ಲಿಸುವ ಅವಕಾಶ ಭಕ್ತರಿಗೆ ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.