ಹಾಸನ: ಮಕ್ಕಳ ಹಾಜರಾತಿ ಕೊರತೆಯಿಂದ ಬಾಗಿಲು ಮುಚ್ಚಿದ್ದ ಜಿಲ್ಲೆಯ 14 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತೆ ಆರಂಭವಾಗುತ್ತಿರುವುದು ಗ್ರಾಮಸ್ಥರು ಹಾಗೂ ಶಿಕ್ಷಕರಲ್ಲಿ ಸಂತಸ ಉಂಟು ಮಾಡಿದೆ.
ಪ್ರಸಕ್ತ ಸಾಲಿಗೆ 121 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮಹಾನಗರಗಳಿಗೆ ಪೋಷಕರ ವಲಸೆ, ಖಾಸಗಿ ಶಾಲೆಗಳ ವ್ಯಾಮೋಹ ಹೀಗೆ ಹಲವು ಕಾರಣಗಳಿಂದ ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಲಾಗಿತ್ತು. ಕೋವಿಡ್ ಲಾಕ್‌ಡೌನ್‌ನಿಂದಾಗಿರುವ ಆರ್ಥಿಕ ಸಂಕಷ್ಟ ಮತ್ತೆ ಸರ್ಕಾರಿ ಶಾಲೆಗಳತ್ತ ಮುಖ ಮಾಡುವಂತೆ ಮಾಡಿದೆ. ಈ ಶಾಲಾ ಕಟ್ಟಡದ ಸಣ್ಣಪುಟ್ಟ ದುರಸ್ತಿ ಕಾರ್ಯ ನಡೆದಿದೆ.
ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಕೆರೆಹಳ್ಳಿ ಗ್ರಾಮದ ಪೂರ್ವ ಪ್ರಾಥಮಿಕ ಶಾಲೆಗೆ 12 ಮಕ್ಕಳು ದಾಖಲಾಗಿದ್ದಾರೆ. ಮರಸು ಹೊಸಹಳ್ಳಿ 14, ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿ ಮುದಲಿಂಗನಕೊಪ್ಪಲು ಗ್ರಾಮದ ಶಾಲೆಗೆ 9, ಬೇಲೂರಿನ ಮುತ್ತಗನ್ನ ಶಾಲೆಗೆ 5, ಹಳೇಬೀಡು ಹೋಬಳಿ ರಾಮನಹಳ್ಳಿ ಪೂರ್ವ ಪ್ರಾಥಮಿಕ ಶಾಲೆಗೆ 6, ಚನ್ನರಾಯಪಟ್ಟಣ ತಾಲ್ಲೂಕು ತಿಮ್ಮಾಪುರ ಪೂರ್ವ ಪ್ರಾಥಮಿಕ ಶಾಲೆಗೆ 11, ಸಕಲೇಶಪುರ ತಾಲ್ಲೂಕು ಶಿಶುವಾಳ ಶಾಲೆಗೆ 7, ಹಾಸನ ತಾಲ್ಲೂಕಿನ ಎಸ್.ತಿಮ್ಮನಹಳ್ಳಿ 4, ಮಾದಾಪುರ 7, ಹೊನ್ನಮನಹಳ್ಳಿ 17, ಹೊಳೆನರಸೀಪುರ ತಾಲ್ಲೂಕಿನ ಗುಳ್ಳದಪುರ 9, ಈಡಿಗನ ಹೊಸೂರು 10, ಅಂಕನಹಳ್ಳಿ 5 ಹಾಗೂ ದಾಸನಕೊಪ್ಪಲು ಶಾಲೆಗೆ 5 ಮಕ್ಕಳು ಪ್ರವೇಶ ಪಡೆದಿದ್ದಾರೆ. ಹಾಸನದಲ್ಲಿ 14 ಶಾಲೆಗಳು ತೆರೆಯುತ್ತಿವೆ.
ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳು 1297, ಹಿರಿಯ ಪ್ರಾಥಮಿಕ ಶಾಲೆಗಳು 1214, ಪ್ರೌಢಶಾಲೆಗಳು 555 ಇವೆ. ಈ ಪಟ್ಟಿಗೆ ಹದಿನಾಲ್ಕು ಶಾಲೆಗಳು ಮತ್ತೆ ಸೇರ್ಪಡೆಯಾಗಿವೆ.
ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಮುಂಬೈ, ಬೆಂಗಳೂರು, ಮುಂಬೈ, ಚೆನ್ನೈ, ಒಡಿಶಾ ಕಡೆಗೆ ತೆರಳಿದ್ದ ಜನರು ಸ್ವಗ್ರಾಮಕ್ಕೆ ಮರಳಿದ್ದಾರೆ. ಸೋಂಕು ತಗ್ಗದ ಕಾರಣ ಉದ್ಯೋಗ ಅರಸಿ ವಾಪಸ್ ಹೋಗಲು ಸಾಧ್ಯವಾಗಿಲ್ಲ. ಹಾಗಾಗಿ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಅಲ್ಲದೇ ಬೇಕರಿ ಉದ್ಯಮಕ್ಕಾಗಿ ಹೊರ ಜಿಲ್ಲೆಗಳಲ್ಲಿ ನೆಲೆಯೂರಿದ್ದ ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಇಪ್ಪತ್ತಕ್ಕೂ ಅಧಿಕ ಕುಟುಂಬಗಳು ಹಳ್ಳಿಗಳಿಗೆ ಮರಳಿವೆ.
ಖಾಸಗಿ ಶಾಲೆಗಳು ಹಳ್ಳಿ ಹಳ್ಳಿಗೆ ವಾಹನ ನಿಯೋಜಿಸಿ ಮಕ್ಕಳನ್ನು ಸೆಳೆದಿದ್ದವು. ಹೀಗಾಗಿ ಸರ್ಕಾರಿ ಶಾಲೆಗಳ ಅವಲಂಬನೆ ಕಡಿಮೆಯಾಗಿತ್ತು.
‘ಮಹಾನಗರಗಳಿಗೆ ವಲಸೆ ಹೋಗಿದ್ದ ಹಲವರು ಕೋವಿಡ್ ಕಾರಣದಿಂದ ಹುಟ್ಟೂರಿನಲ್ಲಿಯೇ ಉಳಿದಿದ್ದು, ಖಾಸಗಿ ಶಾಲೆಗೆ ಶುಲ್ಕ ಪಾವತಿಸಲು ಸಾಧ್ಯವಾಗದೆ ಕೆಲವರು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಮತ್ತೆ ತೆರೆಯುತ್ತಿರುವ ಹದಿನಾಲ್ಕು ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಶಿಕ್ಷಕರ ಕೊರತೆ ಇಲ್ಲ’ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.