ADVERTISEMENT

19 ಪ್ರಕರಣ, 30 ಕೆ.ಜಿ. ಗಾಂಜಾ ವಶ

ಮಕ್ಕಳ ಬಗ್ಗೆ ಪಾಲಕರಿಗೆ ಎಚ್ಚರ ಇರಲಿ: ಎಸ್ಪಿ ಮನವಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 11:53 IST
Last Updated 16 ಸೆಪ್ಟೆಂಬರ್ 2020, 11:53 IST
ಆರ್.ಶ್ರೀನಿವಾಸ್‌ ಗೌಡ
ಆರ್.ಶ್ರೀನಿವಾಸ್‌ ಗೌಡ   

ಹಾಸನ: ಜಿಲ್ಲೆಯ ರೈತರ ಜಮೀನುಗಳಲ್ಲಿ ಗಾಂಜಾ ಪತ್ತೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ 9 ತಿಂಗಳಲ್ಲಿ 19 ಪ್ರಕರಣ ದಾಖಲಿಸಿ, 30 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಅರಣ್ಯ, ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಅರಸೀಕೆರೆ- ಬೇಲೂರು ಹಾಗೂ ಇತರೆ ತಾಲ್ಲೂಕಿನಲ್ಲಿ ಶುಂಠಿ ಹಾಗೂ ಇತರೆ ಬೆಳೆಗಳ ಮಧ್ಯೆ ಗಾಂಜಾ ಬೆಳೆಯಲಾಗುತ್ತಿದೆ. ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿನವರು ಜಿಲ್ಲೆಯ ರೈತರಿಗೆ ಗಾಂಜಾ ಬೆಳೆಯಲು ಪ್ರಚೋದಿಸುತ್ತಿದ್ದಾರೆ. ಅಲ್ಲದೇ ಸ್ಥಳೀಯರು ಸಹ ಬೆಳೆದು ನೆರೆ ರಾಜ್ಯಗಳಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ತಿಳಿಸಿದರು.

ಕಳೆದ 20 ದಿನದಲ್ಲಿ 11 ಪ್ರಕರಣ ದಾಖಲಿಸಿ 18 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆಲೂರು, ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ, ಅರಕಲಗೂಡು ತಾಲ್ಲೂಕಿನಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ADVERTISEMENT

ಶಾಲಾ, ಕಾಲೇಜುಗಳು ಕಾಲೇಜು ವಿದ್ಯಾರ್ಥಿಗಳು ಹಾಗೂ ವ್ಯಸನಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿರುವ ಜಾಲ ಕಾರ್ಯನಿರ್ವಹಿಸುತ್ತಿದ್ದು,ಮೈಸೂರು, ಬೆಂಗಳೂರು, ಸ್ಥಳೀಯರ ನಂಟು ಸಹ ಹೊಂದಿದೆ. ಎಂಜಿನಿಯರ್‌, ಪದವಿ ವ್ಯಾಸಂಗ ಮಾಡುವ ಮಕ್ಕಳ ಮೇಲೆ ಪಾಲಕರು ಗಮನ ಇಟ್ಟಿರಬೇಕು. ಅಮಲೇರಿಸುವ‌ ಪದಾರ್ಥಗಳನ್ನು ಸೇವಿಸುತ್ತಿದ್ದರೆ, ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು.

ಗಾಂಜಾ ಮಾರಾಟ ಪ್ರಕರಣ ಹೆಚ್ಚುತ್ತಿರುವುದರಿಂದ ಸಕಲೇಶಪುರ ಭಾಗದ ರೆಸಾರ್ಟ್ ಹಾಗೂ ಹೋಂ ಸ್ಟೇ ಮಾಲೀಕರ ಸಭೆ ಕರೆದು ಚರ್ಚಿಸಲಾಗಿದೆ. ಗಾಂಜಾ, ಇತರೆ ಮಾದಕ ವಸ್ತು ಮಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧಿಸಬೇಕು. ರೇವ್ ಪಾರ್ಟಿ ಸೇರಿದಂತೆ ಇತರೆ ಮನರಂಜನೆ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಸೂಚನೆ ನೀಡಲಾಗಿದೆ ಎಂದರು.

ಹೋಂ ಸ್ಟೇ, ರೆಸಾರ್ಟ್ ಗಳಿಗೆ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ
ನಿರ್ದಿಷ್ಟ ಪ್ರದೇಶಗಳಲ್ಲಿ ಹಾಗೂ ವಾರಂತ್ಯದಲ್ಲಿ ಹೆಚ್ಚು ನಾಕಬಂದಿ ಹಾಕಿ, ಪ್ರತಿಯೊಂದು ವಾಹನಗಳನ್ನು
ತಪಾಸಣೆ ಮಾಡಿ ಬಿಡಲಾಗುತ್ತಿದೆ ಎಂದು ವಿವರಿಸಿದರು.


ಡ್ರಗ್ಸ್‌ ಜಾಲದ ಬಗ್ಗೆ ಮಾಹಿತಿ ನೀಡಿ

ಡ್ರಗ್ಸ್‌ ದಂದೆಗೆ ಕಡಿವಾಣ ಹಾಕಲಾಗುವುದು. ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಮೊಬೈಲ್‌ ನಂ. 9480804701 ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ
ಇರಿಸಲಾಗುವುದು ಎಂದು ಎಸ್ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.