ADVERTISEMENT

23ಕ್ಕೆ ‘ಸಂವಿಧಾನ ಓದು’ ಅಭಿಯಾನ

ಅರಿವು ಮೂಡಿಸಲು 100 ಮಂದಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 14:01 IST
Last Updated 20 ಅಕ್ಟೋಬರ್ 2018, 14:01 IST
ಎಚ್.ಆರ್ .ನವೀನ್ ಕುಮಾರ್‌
ಎಚ್.ಆರ್ .ನವೀನ್ ಕುಮಾರ್‌   

ಹಾಸನ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳ್ಳಿಸಲು ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅ. 23ರಂದು ‘ಸಂವಿಧಾನ ಓದು ಅಭಿಯಾನ’ ಪುಸ್ತಕ ಬಿಡುಗಡೆ ಹಾಗೂ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ಹೇಳಿದರು.

‘ಸಂವಿಧಾನದ ಮೂಲ ಆಶಯಗಳನ್ನು ಮೂಲೆಗುಂಪು ಮಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಪರಿಚಯ ಮಾಡುವುದಕ್ಕಾಗಿ ಆಂದೋಲನವನ್ನು ಪ್ರಾರಂಭಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬರೆದಿರುವ ‘ಸಂವಿಧಾನ ಓದು’ ಪುಸ್ತಕವನ್ನು ಕಾಲೇಜು ವಿದ್ಯಾರ್ಥಿ, ಶಿಕ್ಷಕರು ಓದಿದ್ದಾರೆ. ಜಿಲ್ಲೆಯ ಅನೇಕ ಶಿಕ್ಷಣ ಸಂಸ್ಥೆಯವರು ಪುಸ್ತಕವನ್ನು ಈಗಾಗಲೇ ಖರೀದಿಸಿ ಓದಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.ಮಂಗಳವಾರ ಬೆಳಗ್ಗೆ 10.30ಕ್ಕೆ ಚಿಂತಕ ಬಂಜಗೆರೆ ಜಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ಎಂ.ಕೃಷ್ಣ ಕಾನೂನು ಕಾಲೇಜಿನ ವಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಸಹಯಾನ ಮತ್ತು ಸಮುದಾಯ ರಾಜ್ಯ ಮುಖಂಡ ವಿಠಲ ಭಂಡಾರಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ 100 ಜನ ಸಂಪನ್ಮೂಲ ವ್ಯಕ್ತಿಗಳಿಗೆ ನಾಗಮೋಹನ್ ದಾಸ್ ತರಬೇತಿ ನೀಡುವರು. ತರಬೇತಿ ಪಡೆದವರು ಸಂವಿಧಾನ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಯಲ್ಲಿ ತೊಡಗುವರು’ ಎಂದು ಹೇಳಿದರು.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯಗಳ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ಆಳುವ ವರ್ಗದವರು ಸಂವಿಧಾನ ಬದಲಿಸಲು ಬಂದಿದ್ದೇವೆ ಎನ್ನುತ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು, ಬಲಪಂಥೀಯರು ಚರ್ಚೆ ನಡೆಸದೆ ಸಂವಿಧಾನ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ಯುವಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಮೂಲ ಆಶಯ ನಾಶ ಮಾಡಲು ಸಾಧ್ಯ ಇಲ್ಲ. ಕಾಲ ಬದಲಾದಂತೆ ತಿದ್ದುಪಡಿಗೂ ಅವಕಾಶ ಇದೆ. ಅದು ಕಾನೂನು ಪ್ರಕಾರ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಸಂವಿಧಾನ ಓದು’ ಪುಸ್ತಕ ಈಗಾಗಲೇ ಹಲವು ಮುದ್ರಣ ಕಂಡಿದೆ. ಇದನ್ನು ಇಂಗ್ಲಿಷ್‌, ಹಿಂದಿ, ಮರಾಠಿ, ಬಂಗಾಳಿಗೂ ಅನುವಾದ ಮಾಡಲಾಗುತ್ತದೆ. ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವುದು’ ಎಂದು ವಿವರಿಸಿದರು.
ದಲಿತ ಮುಖಂಡ ರಾಜಶೇಖರ್, ವಕೀಲ ಜಯರಾಮ್ ನಾಯಕರಹಳ್ಳಿ, ಎಂ.ಜಿ.ಪೃಥ್ವಿ, ವಸಂತ್‌ಕುಮಾರ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಆಶಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.