ADVERTISEMENT

ಹಾಸನ | 3 ದಿನ ಧಾರ್ಮಿಕ ಕಾರ್ಯಕ್ರಮ: ಶಂಭುನಾಥ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 13:40 IST
Last Updated 10 ಫೆಬ್ರುವರಿ 2025, 13:40 IST
ಶಂಭುನಾಥ ಸ್ವಾಮೀಜಿ
ಶಂಭುನಾಥ ಸ್ವಾಮೀಜಿ   

ಹಾಸನ: ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಒಕ್ಕಲಿಗರ ಸಂಘದ ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಸಕಲೇಶಪುರದಲ್ಲಿ 125ನೇ ಹುಣ್ಣಿಮೆ ಗುರು ತೋರಿದ ತಿಂಗಳ ಮಾಮನ ತೇರು ಶತೋತ್ತರ ರಜತ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಫೆ. 13 ರಿಂದ 15ರವರೆಗೆ ನಡೆಯಲಿವೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಮಠದ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಶ್ರೀಗಳು, ಪ್ರತಿ ತಿಂಗಳು ಹಾಸನದಲ್ಲಿ ಹುಣ್ಣಿಮೆ ಕಾರ್ಯಕ್ರಮ ಮಾಡುತ್ತೇವೆ. ವಾರ್ಷಿಕ ಹುಣ್ಣಿಮೆಯನ್ನು ತಾಲ್ಲೂಕು ಕೇಂದ್ರದಲ್ಲಿ ಮಾಡುತ್ತಿದ್ದೆವು. ರಜತ ಹುಣ್ಣಿಮೆಯನ್ನು ಚನ್ನರಾಯಪಟ್ಟಣ, ಸುವರ್ಣ ಹುಣ್ಣಿಮೆಯನ್ನು ಹಾಸನ, ಅಮೃತ ಹುಣ್ಣಿಮೆಯನ್ನು ಬೇಲೂರಿನಲ್ಲಿ ಹಾಗೂ ಅರಕಲಗೂಡಿನಲ್ಲಿ ಶತಮಾನೋತ್ಸವ ಮಾಡಿದ್ದೇವೆ. ಶತೋತ್ತರ ರಜತ ಹುಣ್ಣಿಮೆ ಕಾರ್ಯಕ್ರಮವನ್ನು ಸಕಲೇಶಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಕಲೇಶಪುರದಲ್ಲಿ 8 ಎಕರೆಯನ್ನು ಮಠಕ್ಕಾಗಿ ಮೀಸಲಿಡಲಾಗಿದೆ. ಮಠದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. ಗುರುವಂದನೆ, ರಜತ ತುಲಾಭಾರ ಇದೆ. ಹೇಮಾವತಿ ನದಿಯ ಹೊಳೆಮಲ್ಲೇಶ್ವರ ದೇವಾಲಯ ಸಮೀಪ ಗಂಗಾರತಿ ಏರ್ಪಡಿಸಲಾಗಿದೆ ಎಂದರು.

ADVERTISEMENT

ಫೆ.13 ರಂದು ಸಕಲೇಶಪುರ ಪಟ್ಟಣದ ಪುರಪ್ರವೇಶ ಮಾಡಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಗಡಿಯಿಂದ ಭವ್ಯ ಸ್ವಾಗತದೊಂದಿಗೆ ಭಕ್ತರು ಬರಮಾಡಿಕೊಳ್ಳಲಿದ್ದಾರೆ. ಸಕಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ನಂತರ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ ಹವನ ಮತ್ತು ಹೇಮಾವತಿ ನದಿಯಲ್ಲಿ ನಡೆಯಲಿರುವ ಗಂಗಾರತಿ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ಕೆಂಪೇಗೌಡರ ಪುತ್ಥಳಿ ಅನಾವರಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಾಲ್ಲೂಕಿನ ಹಲವಾರು ಮಂದಿ ಜಾತಿ ಭೇದ ಮರೆತು ಆರ್ಥಿಕ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಒಕ್ಕಲಿಗ ಮುಖಂಡ ಬೈರಮುಡಿ ಚಂದ್ರು, ಎಚ್.ಬಿ. ಮದನಗೌಡ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಸುಬ್ರಹ್ಮಣ್ಯ, ಭಾಸ್ಕರ್ ಮುಂತಾದವರು ಇದ್ದರು.

ರಾಜ್ಯಮಟ್ಟದ ಕೃಷಿ ಮೇಳ ಫೆ. 14ರಂದು

ಬೆಳಿಗ್ಗೆ 8.30ಕ್ಕೆ ಆದಿಚುಂಚನಗಿರಿ ಶಾಖಾ ಮಠದ ಕಟ್ಟಡ ಕಾಮಗಾರಿ ಭೂಮಿಪೂಜೆ ನೆರವೇರಲಿದೆ. 9.30ಕ್ಕೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ನೆರವೇರಿಸಲಾಗುವುದು. ನಂತರ 1008 ಪೂರ್ಣಕುಂಭಗಳನ್ನು ಹೊತ್ತು ಮಹಿಳೆಯರ ಸ್ವಾಗತದೊಂದಿಗೆ ನಿರ್ಮಲಾನಂದನಾಥ ಸ್ವಾಮೀಜಿ ಮೆರವಣಿಗೆ ನಡೆಯಲಿದ್ದು ಹೆಸರಾಂತ ಕಲಾವಿದರೊಂದಿಗೆ ಸಕಲೇಶಪುರದ ಮುಖ್ಯ ರಸ್ತೆಯ ಮೂಲಕ ವೇದಿಕೆ ಆವರಣಕ್ಕೆ ಬರಲಿದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮವಾಗಿ ಸಂಜೆ ಬಿಜಿಎಸ್ ಬೆಳದಿಂಗಳೋತ್ಸವ ನಡೆಯಲಿದೆ ಎಂದು ಶಂಭುನಾಥ ಸ್ವಾಮೀಜಿ ಹೇಳಿದರು ಹೇಳಿದರು. ಫೆ. 15ರಂದು ಬೆಳಿಗ್ಗೆ 9.30 ಕ್ಕೆ ರಾಜ್ಯಮಟ್ಟದ ಕೃಷಿ ಮೇಳ ನಡೆಯಲಿದ್ದು ರೈತರಿಗೆ ಮಾಹಿತಿ ನೀಡಲು ಕೃಷಿ ತಜ್ಣರು ಬರುತ್ತಾರೆ. ಸಂಜೆ 5.30 ಕ್ಕೆ ಸಕಲೇಶಪುರ ತಾಲ್ಲೂಕಿನ ವಿವಿಧ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.