ADVERTISEMENT

ಹಾಸನ: ಮಳೆಯಿಂದ ₹300 ಕೋಟಿಗೂ ಅಧಿಕ ನಷ್ಟ- ಶಾಸಕ ಎಚ್.ಡಿ. ರೇವಣ್ಣ

ರಸ್ತೆಗಾಗಿ ಪ್ರತಿಕ್ಷೇತ್ರಕ್ಕೆ ₹20 ಕೋಟಿ, ಪಂಚಾಯಿತಿ ₹5 ಕೋಟಿ ನೀಡಿ: ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 8:01 IST
Last Updated 23 ಜುಲೈ 2022, 8:01 IST
ಎಚ್‌.ಡಿ ರೇವಣ್ಣ
ಎಚ್‌.ಡಿ ರೇವಣ್ಣ   

ಹಾಸನ: ಜಿಲ್ಲೆಯಲ್ಲಿ ಸುರಿದ ಅಪಾರ ಪ್ರಮಾಣದ ಮಳೆಯಿಂದಾಗಿ ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದ್ದು, ₹300 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಅಗತ್ಯ ಪರಿಹಾರ ಬಿಡುಗಡೆ ಮಾಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.

ಸಂಸದರ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹20 ಕೋಟಿ ಹಾಗೂ ಪ್ರತಿ ಪಂಚಾಯಿತಿಗೆ ₹5 ಕೋಟಿ ಬಿಡುಗಡೆ ಮಾಡಬೇಕು. ಆದಷ್ಟು ಶೀಘ್ರ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ನಷ್ಟದ ನಿಖರ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದರು.

ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದಂತಹ ಮಳೆ ಬಿದ್ದಿದ್ದು, ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿವೆ. ಜಿಲ್ಲೆಯ ಜಲಾಶಯಗಳು ಅವಧಿಗೂ ಮುನ್ನ ಭರ್ತಿಯಾಗಿದ್ದು, ನೆರೆ ಹಾವಳಿಯಿಂದ ಹೆಚ್ಚು ಹಾನಿಯಾಗಿದೆ ಎಂದರು.

ADVERTISEMENT

ಸಕಲೇಶಪುರ, ಆಲೂರು, ಅರಕಲಗೂಡು, ಹೊಳೆನರಸೀಪುರ, ಬೇಲೂರು ಸೇರಿದಂತೆ ಹಾನಿಯಾಗಿರುವ ತಾಲ್ಲೂಕುಗಳನ್ನು ನೆರೆ ಹಾವಳಿ ಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಣೆ ಮಾಡುವಂತೆ ಆಗ್ರಹಿಸಿದರು.

ಮಳೆಯಿಂದ ಸಕಲೇಶಪುರ ತಾಲ್ಲೂಕಿನಲ್ಲಿ ₹40 ಕೋಟಿಗೂ ಅಧಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, ಬಹುತೇಕ ರಸ್ತೆಗಳು ಗುಂಡಿಮಯವಾಗಿದೆ. ಹೊಳೆನರಸೀಪುರ ತಾಲೂಕಿನಲ್ಲೂ ಬಹುತೇಕ ರಸ್ತೆಗಳು ಕೆಸರುಮಯವಾಗಿದ್ದು, ಗದ್ದೆ ನಾಟಿ ಮಾಡುವ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಅಂಗನವಾಡಿ, ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಮಳೆಯ ಕಾರಣ ಬಹುತೇಕ ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಪ್ರತಿ ತಾಲ್ಲೂಕಿನ ಅಂಗನವಾಡಿ ಹಾಗೂ ಶಾಲೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಟ್ಟಡಗಳು ಬಿದ್ದ ನಂತರ ಸಚಿವರು ಬಂದು ಪರಿಹಾರ ವಿತರಣೆ ಮಾಡಿ ಸಾಂತ್ವನ ಹೇಳುವ ಬದಲು, ಬೀಳುವ ಹಂತದಲ್ಲಿರುವ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕಾಫಿ ಸೇರಿದಂತೆ ಬಹುತೇಕ ಕೃಷಿ ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ಸಂಬಂಧಪಟ್ಟ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸಮೀಕ್ಷೆ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಯಡಿಯೂರಪ್ಪ ರಾಜಕೀಯದಲ್ಲಿ ಮುಂದುವರಿಯಲಿ’

ಬಿ.ಎಸ್. ಯಡಿಯೂರಪ್ಪ ಹಿರಿಯರು. ರಾಜ್ಯದ ರಾಜಕೀಯದಲ್ಲಿ ಹಾಗೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಅವರ ಸಲಹೆ ಸೂಚನೆ ಇನ್ನೂ ಬೇಕಿದೆ. ಅವರು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದು ಎಚ್.ಡಿ. ರೇವಣ್ಣ ಹೇಳಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರು ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ರೈತ ಪರ ಹೋರಾಟಗಳಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಂಡ ನಾಯಕರಾಗಿದ್ದು, ಇನ್ನಷ್ಟು ದಿನ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯಬೇಕು ಎಂದರು.

‘ಅಂಗನವಾಡಿ ಕಾರ್ಯಕರ್ತೆಯರನ್ನು ನಿಂದಿಸಿಲ್ಲ’

ಹೊಳೆನರಸೀಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಿಂದನೆ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಎಚ್.ಡಿ. ರೇವಣ್ಣ, ‘ಪ್ರತಿಭಟನನಿರತ ಅಂಗನವಾಡಿ ಕಾರ್ಯಕರ್ತೆಯರಿಗೆ ನಾನು ಯಾವುದೇ ನಿಂದನೆ ಮಾಡಿಲ್ಲ. ಯಾವುದೇ ಸಮಸ್ಯೆ ಇದ್ದರೂ ಕ್ಷೇತ್ರದ ಶಾಸಕನಾಗಿರುವ ನನ್ನ ಬಳಿ ಬಂದು ಪ್ರಸ್ತಾಪ ಮಾಡಬಹುದಿತ್ತು. ಪ್ರತಿಭಟನೆ ನೆಪದಲ್ಲಿ ಕ್ಷೇತ್ರದಲ್ಲಿ ಪ್ರಚೋದನೆ ಮಾಡುವ ಕೆಲಸಕ್ಕೆ ನಾನು ಮನ್ನಣೆ ನೀಡುವುದಿಲ್ಲ’ ಎಂದರು.

‘ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸ್ವತಃ ನಾನೇ ತಪ್ಪು ಮಾಡಿದ್ದರೆ, ಅದನ್ನು ಪ್ರಶ್ನಿಸಲಿ. ಅದನ್ನು ಬಿಟ್ಟು ಪ್ರತಿಭಟನೆ ಹಾದಿ ಹಿಡಿಯುವುದು ಸರಿಯಲ್ಲ. ಪ್ರತಿಭಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾತ್ರ ನಾನು ತರಾಟೆಗೆ ತೆಗೆದುಕೊಂಡಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಯಾವುದೇ ನಿಂದನೆ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರತಿಭಟನನಿರತರನ್ನು ನಿಂದಿಸಿದ್ದರೆ ಬಹಿರಂಗ ಚರ್ಚೆಗೆ ಸಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.