ADVERTISEMENT

38 ಎಕರೆ ಅಕ್ರಮ ಮಂಜೂರು: ಕ್ರಮಕ್ಕೆ ಶಾಸಕ ಎ.ಮಂಜು ಒತ್ತಾಯ

ಅಧಿಕಾರಿಗಳು, ಮಧ್ಯವರ್ತಿಗಳ ವಿರುದ್ಧ ಕ್ರಮಕ್ಕೆ ಶಾಸಕ ಎ.ಮಂಜು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 13:29 IST
Last Updated 18 ಫೆಬ್ರುವರಿ 2025, 13:29 IST
ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎ.ಮಂಜು ದಾಖಲೆ ಪ್ರದರ್ಶಿಸಿದರು
ಕೊಣನೂರಿನ ಬಿ.ಎಂ.ಶೆಟ್ಟಿ ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎ.ಮಂಜು ದಾಖಲೆ ಪ್ರದರ್ಶಿಸಿದರು   

ಕೊಣನೂರು: ‘ಅರಣ್ಯ ಇಲಾಖೆಯ ಹೆಸರಿನಲ್ಲಿರುವ 38 ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎ.ಮಂಜು ಒತ್ತಾಯಿಸಿದರು.

ಪಟ್ಟಣದ ಬಿ.ಎಂ. ಶೆಟ್ಟಿ ಸರ್ಕಾರಿ ಕಾಲೇಜಿನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಯಗಟಿ ಗ್ರಾಮದ ಸರ್ವೆ ನಂಬರ್ 34, 35 ಮತ್ತು 154ರ 38 ಎಕರೆ ಜಮೀನು ಪಹಣೆಯಲ್ಲಿ ಡೀಮ್ಡ್ ಅರಣ್ಯಕ್ಕೆ ಸೇರಿರುವ ಸ್ಥಳ ಎಂದು ನಮೂದಾಗಿದ್ದರೂ ಐವರಿಗೆ ತಲಾ 3 ಎಕರೆ 20 ಗುಂಟೆಯಂತೆ ಮಂಜೂರು ಮಾಡಲಾಗಿದೆ. ದಾಖಲೆಯಲ್ಲಿ ಬಗರ್ ಹುಕುಂ ಕಮಿಟಿಯಲ್ಲಿ ಒಪ್ಪಿಗೆ ಪಡೆದು ಮಂಜೂರು ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಿದ್ದು, ಈ ವಿಷಯವು ಗಮನಕ್ಕೆ ಬಂದು 15 ದಿನಗಳಾದರೂ ಇದುವರೆಗೂ ಜಿಲ್ಲಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್ ಆಗಲಿ ಕ್ರಮಕ್ಕೆ ಮುಂದಾಗದಿರುವುದು ಅನುಮಾನ ಮೂಡಿಸುವಂತಿದೆ’ ಎಂದು ದೂರಿದರು.

‘ಈ ಹಿಂದೆ ಇದ್ದ ಬಗರ್‌ಹುಕುಂ ಕಮಿಟಿಯಲ್ಲಿ ಆಗದಿರುವ ನಿರ್ಣಯವನ್ನು ಆಗಿದೆ ಎಂದು ದಾಖಲೆ ಸೃಷ್ಟಿಸಲು ದಾಖಲೆಯನ್ನು ತಿದ್ದಿ ಖಾಲಿಯಿರುವ ಜಾಗದಲ್ಲಿ ಹೊಸದಾಗಿ ಹೆಸರುಗಳನ್ನು ಬರೆದು ಜಮೀನನ್ನು ಐವರ ಹೆಸರಿಗೆ ಮಾಡಿಕೊಡಲಾಗಿದೆ. ಇದರಲ್ಲಿ ಎಷ್ಟು ಅವ್ಯವಹಾರ ನಡೆದಿದೆ, ರೈತರ ಬಳಿ ಎಷ್ಟು ಲಂಚ ಪಡೆದಿದ್ದಾರೆ, ಯಾವ್ಯಾವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಶಾಮೀಲಾಗಿದ್ದಾರೆ ಎಂಬುದನ್ನು ತಿಳಿದು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬೇಕಿತ್ತು. ಅಕ್ರಮವಾಗಿ ಮಂಜೂರು ಮಾಡಿರುವ ಜಮೀನನ್ನು ಕೂಡಲೇ ಆರಣ್ಯ ಇಲಾಖೆಯವರು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು. ಕಂದಾಯ ಮಂತ್ರಿಗಳು, ಸರ್ಕಾರವು ಅವ್ಯವಹಾರ ಮಾಡಿರುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈ ಪ್ರದೇಶವು ಡೀಮ್ಡ್ ಅರಣ್ಯ ಪ್ರದೇಶವೆಂದು ಮೊದಲೇ ದಾಖಲೆಗಳಿದ್ದು, ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು 12 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಬಗರ್ ಹುಕುಂ ಮೂಲಕ ಹಕ್ಕು ಪಡೆದ ಐವರು ಖಾತೆ ಮಾಡಿಸಿಕೊಳ್ಳಲು ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ. ಅರಕಲಗೂಡು ತಹಶೀಲ್ದಾರ್ ಆದೇಶದ ಸಂಖ್ಯೆಯೊಂದಿಗೆ ಐವರಿಗೆ ಮಂಜೂರು ಮಾಡಲಾಗಿದೆ’ ಎಂದರು.

‘ಅರಣ್ಯ ಇಲಾಖೆಯ ಜಮೀನನ್ನು ಖಾಸಗಿಯವರು ತಮ್ಮ ಮಾಲೀಕತ್ವಕ್ಕೆ ಪಡೆಯಬಾರದು ಎಂಬ ನಿಯಮವಿದ್ದರೂ ಸಹ ಡೀಮ್ಡ್ ಅರಣ್ಯ ಪ್ರದೇಶವನ್ನು ಮಂಜೂರು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯ ಜಮೀನನ್ನು ಕಂದಾಯ ಇಲಾಖೆಯವರು ಬೇರೆಯವರ ಹೆಸರಿಗೆ ಮಾಡಿಕೊಡಲು ಅಧಿಕಾರವಿದೆಯೇ? 2022ರಲ್ಲಿಯೇ ಅರಣ್ಯ ಇಲಾಖೆಗೆ ಸೇರಿದ ಸ್ಥಳ ಎಂದು ದಾಖಲೆಯಿದ್ದರೂ ದುರುದ್ದೇಶಪೂರ್ವಕವಾಗಿ ಮಂಜೂರು ಮಾಡಲಾಗಿದೆ’ ಎಂದು ಆರೋಪಿಸಿದರು.

ಕಾಲೇಜು ಸಿಡಿಸಿ ಸಮಿತಿ ಉಪಾಧ್ಯಕ್ಷ ಎಸ್.ಸಿ.ಚೌಡೇಗೌಡ, ಗ್ರಾ.ಪಂ. ಅಧ್ಯಕ್ಷೆ ಮಿಸ್ಬಾ, ಮುಖಂಡ ಕೆ.ಜೆ.ರಾಜು ಇದ್ದರು.

‘ಸರ್ಕಾರ ಗಂಭೀರವಾಗಿ ಪರಿಗಣಿಸಲಿ’

‘ಜಮೀನು ಮಂಜೂರಾಗಿರುವ 2023ರಲ್ಲಿ ನಾನೇ ಶಾಸಕನಾಗಿದ್ದೆ. ಆಗ ನಾನು ಯಾವುದೇ ಬಗರ್ ಹುಕುಂ ಸಭೆ ನಡೆಸಿಲ್ಲ. ಅಧಿಕಾರಿಗಳು ಯೋಜನೆ ರೂಪಿಸಿ ರೈತರಿಗೆ ಮೋಸ ಮಾಡುತ್ತಿದ್ದು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು’ ಎಂದು ಎ.ಮಂಜು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.