ADVERTISEMENT

40 ಪಲ್ಲಕ್ಕಿಯಲ್ಲಿ ಗ್ರಂಥಗಳ ಮೆರವಣಿಗೆ

ವೈಭವದ ಶ್ರುತ ಪಂಚಮಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 9:10 IST
Last Updated 18 ಜೂನ್ 2018, 9:10 IST

ಶ್ರವಣಬೆಳಗೊಳ: ಪಟ್ಟಣದ ಚಾವುಂಡರಾಯ ಸಭಾಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಷ್ಟಾವಧಾನ ಸಹಿತ ಶ್ರುತಪೂಜೆಯನ್ನು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಾನುವಾರ ನಡೆಯಿತು.

ಬೆಳಿಗ್ಗೆ ಬಾಹುಬಲಿಮೂರ್ತಿಗೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು. ನಂತರ 40 ಪಲ್ಲಕ್ಕಿಯಲ್ಲಿಧವಲಾ, ಜಯಧವಲಾ, ಮಹಾಧವಲ, ಗೊಮ್ಮಟಸಾರ ಗ್ರಂಥಗಳ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯು ಭಂಡಾರ ಬಸದಿ ವಿಂಧ್ಯಗಿರಿ ಪರ್ವತ, ಬೆಂಗಳೂರು ಮಂಗಾಯಿ ಬಸದಿಗಳ ರಸ್ತೆಯ ಮೂಲಕ ಚಾವುಂಡರಾಯ ಸಭಾ ಮಂಟಪಕ್ಕೆ ತಲುಪಿತು.

ADVERTISEMENT

ಮೈಸೂರು ಬ್ಯಾಂಡ್‌ಸೆಟ್‌ ಚಿಟ್ಟಿಮೇಳ, ನಗಾರಿ ತಂಡ, ಕೊಂಬು ಕಹಳೆಗಳು, ಚಂಡೆವಾದ್ಯ, ಪಂಚವಾದ್ಯ, ಮಂಗಳ ವಾದ್ಯ, ಬಾಹುಬಲಿ ಪ್ರತಿಷ್ಠಾಪಿಸಿದ ಪ್ರಭಾವನಾ ರಥ, ಮಂಗಳಕಳಸ ಸ್ಥಾಪಿಸಿದ ರಥ ಇತ್ತು.

ಇಕ್ಕೆಲೆಗಳಲ್ಲಿ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಚತುರ್ಮುಖ ಜಿನರಿಗೆ ಶ್ರುತಸ್ಕಂಧಕ್ಕೆ ಮತ್ತು ಜಿನವಾಣಿ ಮಾತೆಗೆ ಅಷ್ಟಮಂಗಲಗಳಿಂದ ಅಷ್ಟಾವಧಾನ ಪೂಜೆಯನ್ನು ಪ್ರತಿಷ್ಠಾಚಾರ್ಯರಾದ ಎಸ್‌.ಡಿ.ನಂದಕುಮಾರ್‌ ನೆರವೇರಿಸಿದರು.

ಶ್ರುತಸ್ಕಂಧಕ್ಕೆ ಸುವರ್ಣ ಖಚಿತ ಓಂಕಾರ ಪದಕ, ಮತ್ತು ಸ್ವಸ್ತಿಕವನ್ನು ಆಚಾರ್ಯರಾದ ವರ್ಧಮಾನಸಾಗರ ಮಹಾರಾಜರು, ಪಂಚಕಲ್ಯಾಣಕ ಸಾಗರ ಮಹಾರಾಜರು ಇತರೆ ತ್ಯಾಗಿವೃಂದದವರು ಅರ್ಪಿಸಿದರು. ನಂತರ ಜಲ, ಗಂಧ, ಫಲ ಅಕ್ಷತೆ, ಪುಷ್ಪ, ಚರು, ದೀಪ, ಧೂಪ,ಬಳಸಿ ಅಷ್ಟವಿಧಾರ್ಚನೆ ಪೂಜೆ ನಡೆಯಿತು.

ವಿವಿಧೆಡೆಯಿಂದ ಬಂದಿದ್ದ ವಿದ್ವಾಂಸರನ್ನು ಗೌರವಿಸಲಾಯಿತು. ತ್ಯಾಗಿಗಳಿಂದ ಆಶೀರ್ವಚನ, ಸಾಂಗ್ಲಿಯ ಕುಬೇರ್‌ ಚೌಗಲೆ ಅವರಿಂದ ಸಂಗೀತ, ಹಾಸನದ ಭಾರತೀಯ ಸಂಗೀತ ನಾಟ್ಯ ಕಲಾತಂಡದ ಸದಸ್ಯರಿಂದ ಭರತನಾಟ್ಯ, ಸುಧಾ ಬರಗೂರು ಅವರಿಂದ ಹಾಸ್ಯ ಭಾಷಣ, ಸರ್ವೇಶ್‌ ಜೈನರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.