ADVERTISEMENT

ಹಾಸನ: ಸಂಗೀತದ ರಸದೌತಣಕ್ಕೆ ಸಜ್ಜಾದ ರುದ್ರಪಟ್ಟಣ

ನಾಳೆಯಿಂದ ಸಂಗೀತೋತ್ಸವ ಆರಂಭ: ನಾಚಾರಮ್ಮ ಪ್ರಶಸ್ತಿ, ನಟನ ಕಲಾ ಸ್ಪರ್ಶಮಣಿ ಬಿರುದು ಪ್ರದಾನ

ಬಿ.ಪಿ.ಗಂಗೇಶ್‌
Published 20 ಮೇ 2025, 7:15 IST
Last Updated 20 ಮೇ 2025, 7:15 IST
ರಾಮನಾಥಪುರ ಹೋಬಳಿಯ ರುದ್ರಪಟ್ಣದಲ್ಲಿರುವ ಸಪ್ತಸ್ವರ ದೇವತಾ ಮಂದಿರ.
ರಾಮನಾಥಪುರ ಹೋಬಳಿಯ ರುದ್ರಪಟ್ಣದಲ್ಲಿರುವ ಸಪ್ತಸ್ವರ ದೇವತಾ ಮಂದಿರ.   

ಕೊಣನೂರು: ಪ್ರತಿ ವರ್ಷವೂ ಹಿಂದೂಸ್ಥಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಬ್ಬದಂತೆ ಆಚರಿಸಲಾಗುವ ರುದ್ರಪಟ್ಟಣ ಸಂಗೀತೋತ್ಸವ ಮೇ 21 ರಿಂದ ಆರಂಭವಾಗಲಿದೆ. ಯುವ ಪ್ರತಿಭೆಗಳ ಜೊತೆಗೆ ಹಿರಿಯ ವಿದ್ವಾಂಸರೂ ಹಾಡುಗಾರಿಕೆ ನಡೆಸುವ ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಶಾಸ್ತ್ರೀಯ ಸಂಗೀತದ ಜೊತೆಗೆ ಪಕ್ಕ ವಾದ್ಯಗಳ ವೈಭವವೂ ಮೇಳೈಸಲಿದ್ದು, ಜುಗಲ್‌ಬಂದಿ, ಯುಗಳ ಪಿಟೀಲು ವಾದನ, ಕೊಳಲು ವಾದನಗಳು ನಾದ ಸ್ವರಗಳ ಸಮ್ಮಿಳನಕ್ಕೆ ಸಾಕ್ಷಿಯಾಗಲಿವೆ.

ರುದ್ರಪಟ್ಟಣದಲ್ಲಿ ಜರುಗುವ ಸಂಗೀತೋತ್ಸವದ ನಿಮಿತ್ತ ಮಂದಿರವು, ರಾಗ, ತಾಳ ಮತ್ತು ನಾದಗಳಿಂದ ವಿಜೃಂಭಿಸಲಿದ್ದು, ವಿವಿಧ ರಾಗಗಳನ್ನು ಹಾಡುವ ಪ್ರತಿಭೆಗಳ ಸ್ವರ ಮಾಧುರ್ಯವನ್ನು ಆಲಿಸಲು ರಾಜ್ಯ, ಹೊರರಾಜ್ಯಗಳ ಸಹಸ್ರಾರು ಶ್ರೋತೃಗಳು 5 ದಿನಗಳ ಕಾಲ ರುದ್ರಪಟ್ಟಣದಲ್ಲಿ ನೆಲೆ ನಿಲ್ಲುತ್ತಾರೆ. ನಿಶ್ಯಬ್ದವಾಗಿ ಗಂಟೆಗಟ್ಟಲೆ ಕುಳಿತು ಕಛೇರಿಗಳನ್ನು ಆಲಿಸಿ. ಚಪ್ಪಾಳೆಯ ಮೂಲಕ ಪ್ರತಿಭೆಗಳನ್ನು ಉತ್ತೇಜಿಸುವುದು ಇಲ್ಲಿನ ವಿಶೇಷ.

ADVERTISEMENT

ಮೊದಲಿಗೆ ಅನುಭವಿ, ಪ್ರಸಿದ್ಧಿ ಪಡೆದ ಸಂಗೀತಗಾರರಿಗಷ್ಟೇ ರುದ್ರಪಟ್ಟಣದ ಸಂಗೀತೋತ್ಸವದಲ್ಲಿ  ಕಛೇರಿ ನಡೆಸಿಕೊಡಲು ಅವಕಾಶ ನೀಡಲಾಗುತ್ತಿತ್ತು. ಕಳೆದ ವರ್ಷದಿಂದ ಅನುಭವಿಗಳ ಜೊತೆಗೆ ಯುವ ಕಲಾವಿದರಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಅವರನ್ನು ಬೆಳಕಿಗೆ ತರುವ ಉದ್ದೇಶದಿಂದ ಹೆಚ್ಚು ಯುವ ಸಂಗೀತ ಪ್ರತಿಭೆಗಳಿಗೆ ಕಛೇರಿ ನಡೆಸಿಕೊಡಲು ಮತ್ತು ಪಕ್ಕವಾದ್ಯ ನುಡಿಸಲು ಅವಕಾಶ ನೀಡಲಾಗುತ್ತಿದೆ ಎನ್ನುತ್ತಾರೆ ಆರ್.ಕೆ. ಪದ್ಮನಾಭ್.

ಸಂಗೀತೋತ್ಸವದಲ್ಲಿ ರಾಜ್ಯದ ವಿವಿಧೆಡೆಗಳ ಹಿರಿಯ, ಕಿರಿಯ, ಸಂಗೀತ ಪ್ರತಿಭೆಗಳು, ಪಕ್ಕವಾದ್ಯ ಕಲಾವಿದರು, ಯುವ ಸಂಗೀತ ಕಲಾವಿದರು, ನೃತ್ಯ ಕಲಾವಿದರು, ಗಮಕ ಕಲಾವಿದರು, ಕಲಾ ಪೋಷಕರಿಗೆ ಬಿರುದು ಪ್ರದಾನ ಮತ್ತು ಗೌರವ ಸಮರ್ಪಣೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಸಂಗೀತೋತ್ಸವವು ಮೇ 21ರಂದು ಬೆಳಿಗ್ಗೆ 10.15ಕ್ಕೆ ಉದ್ಘಾಟನೆ ಆಗಲಿದೆ. ನಿರಂತರ 5 ದಿನಗಳ ಕಾಲ ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಗೀತ ಕಾರ್ಯಕ್ರಮ, ವಾದ್ಯಗೋಷ್ಠಿಗಳು ಜರುಗಲಿವೆ. ಮೇ 24 ರಂದು ಮಧ್ಯಾಹ್ನ 3.30 ಕ್ಕೆ ರುದ್ರಪಟ್ಟಣದ ಪರಂಪರೆ ಹಿರಿಯ ವಿದ್ವಾಂಸರು, ವರ್ಧಿಷ್ಣು ಕಲಾವಿದರಿಗೆ ಬಿರುದು ಪ್ರದಾನ ಹಾಗೂ ಗೌರವ ಸಮರ್ಪಣೆ ನಡೆಯಲಿದೆ. ಸಂಜೆ 7.30ಕ್ಕೆ ನಟ, ಸಾಹಿತಿ ಶ್ರೀನಿವಾಸ ಪ್ರಭು ಅವರಿಗೆ ‘ನಾಚಾರಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಕಾರ್ಯಕ್ರಮದ ಆಯೋಜಕ, ಸಂಗೀತ ವಿದ್ವಾಂಸ ಡಾ. ಅರ್.ಕೆ. ಪದ್ಮನಾಭ್ ತಿಳಿಸಿದ್ದಾರೆ.

ಸಪ್ತಸ್ವರ ದೇವತಾ ಮಂದಿರದಲ್ಲಿರುವ ಸಂಗೀತ ದೇವತೆಗಳ ಮೂರ್ತಿಗಳು.
ದ್ವಾದಶ ಸ್ವರ ಸ್ತಂಭ ಮಂಟಪ

‘ಸಂಗೀತದ ಪ್ರಾಮುಖ್ಯತೆ ಮನವರಿಕೆ’

‘ಸಂಗೀತ ಅಗತ್ಯತೆ ಪ್ರಾಮುಖ್ಯತೆ ಮತ್ತು ಮಾಧುರ್ಯವನ್ನು ಗ್ರಾಮೀಣರಿಗೂ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಪ್ರತಿವರ್ಷ ಲಕ್ಷಾಂತರ ರೂಪಾಯಿ ವ್ಯಯಿಸಿ ರುದ್ರಪಟ್ಟಣ ಸಂಗೀತೋತ್ಸವವನ್ನು ಮುನ್ನಡೆಸಲಾಗುತ್ತಿದೆ’ ಎನ್ನುತ್ತಾರೆ ಗಾನ ಕಲಾಭೂಷಣ ಡಾ.ಆರ್.ಕೆ.ಪದ್ಮನಾಭ್. ‘ಶತಮಾನಗಳಿಂದ ಸಂಗೀತ ಕ್ಷೇತ್ರಕ್ಕೆ ನೂರಾರು ಪ್ರತಿಭೆಗಳನ್ನು ಉಡುಗೊರೆಯಾಗಿ ನೀಡಿರುವ ಕರ್ಮಭೂಮಿ ರುದ್ರಪಟ್ಟಣದಲ್ಲಿ ಸಂಗೀತದ ಸೌರಭ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಎಲ್ಲೆಡೆ ಸಂಗೀತ ಪಸರಿಸುವ ಮತ್ತು ಇಲ್ಲಿನ ನೂರಾರು ಕಲಾವಿದರ ಸಂಗೀತ ಪರಂಪರೆಯನ್ನು ಮುಂದುವರಿಸುವುದರ ಜೊತೆಗೆ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.