ADVERTISEMENT

ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಿ

ಚಾಕೇನಹಳ್ಳಿ ಗ್ರಾಮದಲ್ಲಿ ಜೆಲೆಟಿನ್ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 13:47 IST
Last Updated 5 ಏಪ್ರಿಲ್ 2021, 13:47 IST
ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತ ಕಾರ್ಮಿಕನ ಕುಟುಂಬದವರಿಗೆ ಸಾಂತ್ವನ ಹೇಳಿದರು
ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತ ಕಾರ್ಮಿಕನ ಕುಟುಂಬದವರಿಗೆ ಸಾಂತ್ವನ ಹೇಳಿದರು   

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿಜೆಲೆಟಿನ್‌ ಸ್ಫೋಟದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಸರ್ಕಾರವನ್ನುಆಗ್ರಹಿಸಿದರು.

ಟ್ರಕ್‌ನಿಂದ ಸ್ಫೋಟಕ ಸಾಮಗ್ರಿಗಳನ್ನು ಅನ್‌ಲೋಡ್‌ ಮಾಡುವ ವೇಳೆ ಜಿಲೆಟಿನ್ ಸ್ಫೋಟಗೊಂಡು ಇಬ್ಬರು
ಮೃತಪಟ್ಟಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮೂವರ
ಕುಟುಂಬಗಳಿಗೂ ಸರ್ಕಾರ ಅಥವಾ ದುರ್ಗಾಂಬ ಎಂಟರ್‌ಪ್ರೈಸೆಸ್‌ ವತಿಯಿಂದ ಪರಿಹಾರ ನೀಡಬೇಕು. ಮನೆಗೆ
ಆಧಾರವಾಗಿದ್ದವರನ್ನು ಕಳೆದುಕೊಂಡು ಪತ್ನಿ, ಮಕ್ಕಳು ಅನಾಥರಾಗಿದ್ದಾರೆ. ಜೀವನ ನಡೆಸುವುದೇಕಷ್ಟವಾಗಿದೆ. ಸ್ಫೋಟಕ ವಸ್ತುಗಳ ಬಗ್ಗೆ ಮಾಹಿತಿ ಇಲ್ಲದೆ ಹೊಟ್ಟೆ ಪಾಡಿಗಾಗಿ ಬಂದು ಈ ಕೆಲಸ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ಮೂರು ತಿಂಗಳಿಗೊಮ್ಮೆ ಸುರಕ್ಷತಾ ಕ್ರಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ
ನಡೆಸಬೇಕು. ಈ ಘಟನೆ ಬಗ್ಗೆ ಸಮಗ್ರ ನಡೆಸಬೇಕು. ಇನ್ನೊಮ್ಮೆ ಜಿಲ್ಲೆಯಲ್ಲಿ ಇಂತ ಘಟನೆ ಮರುಕಳಿಸಬಾರದು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ಕ್ರಷರ್‌ ಮಾಲೀಕರಿಗೆ ಕೆಲ ಅಧಿಕಾರಿಗಳು ಧಮ್ಕಿ
ಹಾಕುತ್ತಿದ್ದು, ತಮಗೆ ಬೇಕಾದವರಿಗೆ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡುತ್ತಿದ್ದಾರೆ. ಯಾರೇ ನಿಯಮ
ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಸರ್ಕಾರ ಕೂಡಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1
ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಬೇಸಿಗೆ ಹೆಚ್ಚಾದಂತೆ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು
ಬಿಗಡಾಯಿಸಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರ ಮುಸುಕಿನ ಗುದ್ದಾಟದಿಂದಾಗಿಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗಾಡೇನಹಳ್ಳಿ ಗೇಟ್‌ ಬಳಿ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಕರ್ತವ್ಯ ನಿರತ ಹೆಡ್‌ಕಾನ್‌ಸ್ಟೆಬಲ್‌ ಮಧುಸೂದನ್‌
ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಮೃತ ಪತ್ನಿಗೆ ಉದ್ಯೋಗ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವು
ನೀಡಬೇಕು ಎಂದು ಮನವಿ ಮಾಡಿದರು.

ಇದೇ 8 ರಂದು ಬೇಲೂರು ಹಾಗೂ 9ರಂದು ಸಕಲೇಶಪುರ ಮತ್ತು ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಆಯೋಜಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.