ADVERTISEMENT

ರಂಗನಾಥಸ್ವಾಮಿ ರಥೋತ್ಸವ

ಬೀದಿಗಳಿಗೆ ತಳಿರು–ತೋರಣ, ವಿದ್ಯುತ್‌ ದೀಪಗಳ ಅಲಂಕಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 10:33 IST
Last Updated 18 ಜನವರಿ 2018, 10:33 IST
ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ರಂಗನಾಥ ಸ್ವಾಮಿಯವರ ದೊಡ್ಡ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ಜರುಗಿತು
ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆ ರಂಗನಾಥ ಸ್ವಾಮಿಯವರ ದೊಡ್ಡ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ಜರುಗಿತು   

ಅರಸೀಕೆರೆ: ತಾಲ್ಲೂಕಿನ ಗುತ್ತಿನಕೆರೆ ರಂಗನಾಥ ಸ್ವಾಮಿ ದೊಡ್ಡ ರಥೋತ್ಸವ ಮಧ್ಯಾಹ್ನ ಸಹಸ್ರಾರು ಭಕ್ತರ ಸಡಗರದ ನಡುವೆ ಬುಧವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಬೀದಿಗಳನ್ನು ತಳಿರು ತೋರಣ, ಬಾಳೆದಿಂಡು ಹಾಗೂ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ.

ಬೆಳಿಗ್ಗೆಯಿಂದಲೇ ರಂಗನಾಥ ಸ್ವಾಮಿ ಮೂಲ ಸನ್ನಿಧಿಯಲ್ಲಿ ಸ್ವಾಮಿಗೆ ದೇವಾಲಯದ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಪೂಜೆಗಳು ನಡೆದವು. ರಂಗನಾಥ ಸ್ವಾಮಿಗೆ ಪುಷ್ಪಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿವಿಧ ಬಗೆಯ ಹೂಗಳ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ಬೆಳಿಗ್ಗೆಯಿಂದಲೇ ಬಂದು ದೇವರ ದರ್ಶನ ಪಡೆದರು.

ADVERTISEMENT

ರಂಗನಾಥ ಸ್ವಾಮಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಗ್ರಾಮ ದೇವತೆಗಳಾದ ತಿಮ್ಮಪ್ಪ ದೇವರು, ಚಲುವರಾಯ ಸ್ವಾಮಿ, ಯಳವಾರೆ ಹುಚ್ಚಮ್ಮ ದೇವಿ, ಹಾರನಹಳ್ಳಿ ಕೋಡಮ್ಮ ದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವಿ, ತಳಲೂರಿನ ಬನ್ನಮಹಾಕಾಳಿ ಅಮ್ಮನವರು ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಮಂಗಲ ವಾದ್ಯಗಳೊಂದಿಗೆ ರಂಗನಾಥ ಸ್ವಾಮಿಯನ್ನು ಮಂಗಲ ಕರಡೇವು ವಾದ್ಯಗಳೊಂದಿಗೆ ರಥ ಮಂಟಪಕ್ಕೆ ಉತ್ಸವದಲ್ಲಿ ಕರೆ ತರಲಾಯಿತು.

ನಂತರ ರಥ ಬೀದಿಯಲ್ಲಿ ಬಣ್ಣ ಬಣ್ಣದ ಬಾವುಟ ಹಾಗೂ ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥ ಚಾಲನೆಗೂ ಮುನ್ನ ಆಕಾಶದಲ್ಲಿ ಗರುಡ ಪಕ್ಷಿಯೊಂದು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ದೃಶ್ಯ ಭಕ್ತರನ್ನು ಪುಳಕಿತರನ್ನಾಗಿಸಿತು. ನಂತರ ರಥದ ಗಾಲಿಗಳಿಗೆ ಪೂಜೆ ಹಾಗೂ ಮಹಾ ಮಂಗಳಾರತಿ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಜನರು ರಥದ ಹಗ್ಗ ಹಿಡಿದು ‘ಗೋವಿಂದಾ.....ಗೋವಿಂದಾ’ ಎಂಬ ನಾಮಸ್ಮರಣೆ ಮಾಡುತ್ತ ರಥವನ್ನು ಎಳೆದರು. ನವ ದಂಪತಿ ಹಾಗೂ ಯುವಕರು ರಥದ ಕಲಶಕ್ಕೆ ಬಾಳೆಹಣ್ಣು ತೂರಿ ಧನ್ಯತೆ ಹೊಂದಿದರು.

ರಥೋತ್ಸವದ ಬಳಿಕ ಬಂದಿದ್ದ ಭಕ್ತರಿಗೆ ದೇವರ ಒಕ್ಕಲಿನವರು ಹಾಗೂ ಗ್ರಾಮಸ್ಥರು ಪಾನಕ ಫಲಾಹಾರ ವಿತರಿಸಿದರು. ನಂತರ ರಂಗನಾಥ ಸ್ವಾಮಿಯವರ ವಸಂತೋತ್ಸವ ಹಾಗೂ ಮಣೇವು ಸೇವೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.