ADVERTISEMENT

ಸರ್ಕಾರಿ ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 9:45 IST
Last Updated 20 ಜನವರಿ 2018, 9:45 IST
ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಜಾನಕಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಜಾನಕಿ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈದ್ಯರು ರೋಗಿಗಳಿಗೆ ಅನುಕೂಲವಾಗುವ ಔಷಧಗಳನ್ನು ಸಾರ್ವಜನಿಕ ಆಸ್ಪತ್ರೆ ಹೊರತುಪಡಿಸಿ ಹೊರ ಔಷಧಾಲಯಗಳಿಗೆ ಬರೆದು ಕಳುಹಿಸುವ ಪ್ರಕ್ರಿಯೆ ನಿಲ್ಲಿಸಬೇಕು. ಅವಶ್ಯಕವಿರುವ ಔಷಧಗಳನ್ನು ಜನೌಷಧ ಕೇಂದ್ರಗಳ ಮೂಲಕ ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಣೆ ಮಾಡುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ 173 ಅಪೌಷ್ಟಿಕ ಮಕ್ಕಳಿದ್ದು, ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡುವ ಮೂಲಕ ಮಕ್ಕಳನ್ನು ಸಾಧಾರಣ ಸ್ಥಿತಿಗೆ ಮರಳಿಸುವ ಪ್ರಯತ್ನವನ್ನು ಶೀಘ್ರವಾಗಿ ಕೈಗೊಳ್ಳಬೇಕು. ಇದಕ್ಕೆ ಅವಶ್ಯಕವಿರುವ ಮಕ್ಕಳ ಅಪೌಷ್ಟಿಕತೆ ಮಾಹಿತಿ ಒಳಗೊಂಡ ವರದಿ ಒದಗಿಸುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸಿಇಒ ನಿರ್ದೇಶನ ನೀಡಿದರು.

ADVERTISEMENT

ಜಂತುಹುಳು ನಿರ್ಮೂಲನೆ ಅಂಗವಾಗಿ ಫೆ.12ರಂದು ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತು ಹುಳುವಿನ ನಿಯಂತ್ರಣ ಮಾತ್ರೆ ನೀಡಲಾಗುವುದು. ಆರೋಗ್ಯ ಮಾಹಿತಿ ಪ್ರಚಾರಗೊಳಿಸುವ ನಿಟ್ಟಿನಲ್ಲಿ ಬೀದಿನಾಟಕ, ವಿವಿಧ ಸ್ಪರ್ಧಾ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರ್.ಎಚ್.ಒ ಜನಾರ್ಧನ ಮಾಹಿತಿ ನೀಡಿದರು.

ಜ.28ರಂದು ನಡೆಯಲಿರುವ ಪಲ್ಸ್ ಪೋಲಿಯೊ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಜಾನಕಿ ತಿಳಿಸಿದರು. ಸಭೆಯಲ್ಲಿ ಪ್ರಸೂತಿ ಆರೈಕೆ, ತಾಯಿ ಮತ್ತು ಮಕ್ಕಳ ಆರೋಗ್ಯ, ತಾಯಿ ಮರಣ ಪ್ರಮಾಣ ವಿಷಯಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆರ್ ವೆಂಕಟೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್, ಜಿಲ್ಲಾ ರೋಗವಾಹಕ ಮತ್ತು ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಗೋಪಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪದ್ಮಾ ಹಾಜರಿದ್ದರು.

* * 

ನಿಯಮ ಉಲ್ಲಂಘಿಸಿ ಔಷಧಗಳನ್ನು ಹೊರಗೆ ಖರೀದಿಸುವಂತೆ ರೋಗಿಗಳಿಗೆ ಚೀಟಿ ಬರೆದು ಕಳುಹಿಸುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ.ಜಾನಕಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.