ADVERTISEMENT

ರಾಜಕೀಯ ತಿರುವು ಪಡೆದ ಡಿ.ಸಿ. ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 11:20 IST
Last Updated 24 ಜನವರಿ 2018, 11:20 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ವಿವಿಧ ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರೆ, ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ.

ಹಣ ಮಾಡಲು ಅವಕಾಶ ನೀಡಲಿಲ್ಲ

‘ರೋಹಿಣಿ ವರ್ಗಾವಣೆಗೆ ಮಹಾಮಸ್ತಕಾಭಿಷೇಕ ಗುತ್ತಿಗೆಯಲ್ಲಿ ಹಣ ಹೊಡೆಯಲು ಅವಕಾಶ ಸಿಗದೇ ಇರುವುದು ಮತ್ತು ಉಸ್ತುವಾರಿ ಸಚಿವ ಮಂಜು ಮಾತಿಗೆ ಸೊಪ್ಪು ಹಾಕದೇ ಇರುವುದು ಪ್ರಮುಖ ಕಾರಣ’ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ADVERTISEMENT

ಮಹಾಮಸ್ತಕಾಭಿಷೇಕದ ಅಟ್ಟಣಿಗೆ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಲಾಗಿತ್ತು. ಅದನ್ನು ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ನೀಡಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಲಿಲ್ಲ. ಅಂದಿನಿಂದ ಸಚಿವರು ಮತ್ತು ಜಿಲ್ಲಾಧಿಕಾರಿ ನಡುವೆ ಶಿಥಲ ಸಮರ ಪ್ರಾರಂಭವಾಯಿತು. ಅಲ್ಲದೇ, ಮಸ್ತಕಾಭಿಷೇಕ ಕಾಮಗಾರಿ ವಿಚಾರದಲ್ಲಿ ಸಚಿವರಿಗೆ ಭ್ರಷ್ಟಾಚಾರ ಮಾಡಲು ಬಿಡಲಿಲ್ಲ. ಕಾನೂನು ಬಾಹಿರ ಕಡತಗಳಿಗೆ ಜಿಲ್ಲಾಧಿಕಾರಿ ಸಹಿ ಮಾಡಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವಿವರಿಸಿದರು.

ವಿಧಾನ ಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಜ. 18 ರಂದು ಆದೇಶ ಹೊರಡಿಸಿದೆ. ಆದರೆ, ಆಯೋಗದ ನಿಯಮ ಉಲ್ಲಂಘಿಸಿ ವರ್ಗಾವಣೆ ಮಾಡಲಾಗಿದೆ. ಈ ವಿಷಯ ಮುಖ್ಯ ಕಾರ್ಯದರ್ಶಿಗೂ ತಿಳಿದಿಲ್ಲ ಎಂದರು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗ ಕೂಡಲೇ ಮಧ್ಯೆ ಪ್ರವೇಶ ಮಾಡಬೇಕು. ದೇವೇಗೌಡರ ತವರು ಜಿಲ್ಲೆ ಹಾಸನ ಮತ್ತು ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಜಿಲ್ಲೆಗಳನ್ನೇ ಸರ್ಕಾರ ಟಾರ್ಗೆಟ್ ಮಾಡಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದನ್ನು ಖಂಡಿಸಿ ಜ. 25 ರಂದು ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೇವಣ್ಣ ತಿಳಿಸಿದರು.

ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಕಾಂಗ್ರೆಸ್‌ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದೆ. 2 ವರ್ಷ ಆಡಳಿತ ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ. ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಶಾಸಕ ಪ್ರಕಾಶ್‌ ಆಗ್ರಹಿಸಿದರು.
ಆಲೂರು–ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕಷ್ಣ ಇದ್ದರು.

ಜಿಲ್ಲಾಧಿಕಾರಿ ವರ್ಗಾವಣೆ ದೊಡ್ಡ ವಿಚಾರವಲ್ಲ

ಜಿಲ್ಲಾಧಿಕಾರಿ ವರ್ಗಾವಣೆ ಆಡಳಿತಾತ್ಮಕ ವಿಚಾರವೆಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದು, ಇದನ್ನು ರಾಜಕೀಯ ಪಕ್ಷಗಳು ದೊಡ್ಡ ವಿಚಾರ ಎಂಬಂತೆ ಬಿಂಬಿಸುತ್ತಿವೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ಹೇಳಿದರು.

ವರ್ಗಾವಣೆ ವಿಚಾರವಾಗಿ ಪರ, ವಿರೋಧ ಪ್ರತಿಭಟನೆಗಳು ನಡೆದಿದೆ. ಅವರು ಅಧಿಕಾರ ಸ್ವೀಕರಿಸಿದ ಕೆಲ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ನಿರ್ಬಂಧ ವಿಧಿಸಿದರು. ಪ್ರತಿಭಟನೆ ನಡೆಸುತ್ತಿದ್ದ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್‌ ಅವರನ್ನು ಅವಮಾನಿಸಿದ್ದರು ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಜೆಡಿಎಸ್‌ ಮುಗಿಸಲು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಎಚ್‌.ಡಿ. ದೇವೇಗೌಡರು ಹೇಳಿದ್ದಾರೆ. ಜಿಲ್ಲಾಧಿಕಾರಿ ವರ್ಗಾವಣೆಗೂ ಜೆಡಿಎಸ್‌ಗೂ ಏನು ಸಂಬಂಧ’ ಎಂದು ಪ್ರಶ್ನಿಸಿದ ಅವರು, ‘ಮಹಾಮಸ್ತಕಾಭಿಷೇಕದ ಅಟ್ಟಣಿಗೆ ನಿರ್ಮಾಣ ಕಾಮಗಾರಿ ಟೆಂಡರ್‌ ಪಾರದರ್ಶಕವಾಗಿ ನಡೆದಿದೆ. ಸಚಿವರು ಕಮಿಷನ್‌ ಪಡೆದಿದ್ದಾರೆ ಎಂಬುದು ಅರ್ಥವಿಲ್ಲದ ಆರೋಪ’ ಎಂದು ಸ್ಪಷ್ಟ ಪಡಿಸಿದರು.
ಮುಖಂಡರಾದ ಮುನಿಸ್ವಾಮಿ, ರವಿ, ವೆಂಕಟೇಶ್‌, ಕುಮಾರಸ್ವಾಮಿ ಇದ್ದರು.

ಚುನಾವಣಾ ಆಯೋಗಕ್ಕೆ ಪತ್ರ

ರೋಹಿಣಿ ಅವರನ್ನು ಯಾವ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಬೇಕು. ಚುನಾವಣೆ ಹತ್ತಿರವಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್‌ ಹೇಳಿದರು.

‘ಮಹಾಮಸ್ತಕಾಭಿಷೇಕ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಶ್ರಮವಹಿಸಿದ್ದಾರೆ. ಜಿಲ್ಲೆಗೆ ಯಾವುದೇ ಅಧಿಕಾರಿ ಬರಬೇಕಾದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪ ಕಾಣಿಗೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು. ರೈತ ಘಟಕದ ಪ್ರಧಾನ ಕಾರ್ಯದರ್ಶಿ ರೇಣುಕುಮಾರ್‌,  ಮುಖಂಡರಾದ ಬಿ.ವಿ. ಕರೀಗೌಡ, ಭುವನಾಕ್ಷ, ವೇಣುಗೋಪಾಲ್‌, ಕಟ್ಟಾಯ ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.