ADVERTISEMENT

7 ತಿಂಗಳಲ್ಲಿ 55 ಬಾಲ್ಯ ವಿವಾಹಗಳಿಗೆ ತಡೆ, ಅಧಿಕಾರಿಗಳ ಕಣ್ತಪ್ಪಿಸಿ 39 ಮದುವೆಗಳು

ಕೆ.ಎಸ್.ಸುನಿಲ್
Published 29 ನವೆಂಬರ್ 2020, 13:15 IST
Last Updated 29 ನವೆಂಬರ್ 2020, 13:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹಾಸನ: ಪ್ರಸಕ್ತ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ 55 ಬಾಲ್ಯವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ತಡೆದಿದ್ದಾರೆ. ಅವರ ಕಣ್ತಪ್ಪಿಸಿ 39 ಮದುವೆಗಳು ನಡೆದು ಹೋಗಿವೆ.

ರಕ್ಷಿಸಲ್ಪಟ್ಟ ಹೆಣ್ಣು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ. 13 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ‌

ಹಾಸನ, ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚಿನ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಇವರಲ್ಲಿ ಬಹುತೇಕರು ಸರಾಸರಿ 14 ರಿಂದ 16 ವರ್ಷದವರು. ಈಗಲೂ ಕದ್ದು ಮುಚ್ಚಿ ಬಾಲ್ಯ ವಿವಾಹಗಳನ್ನು ನೆರವೇರಿಸಲು ಯತ್ನಗಳು ನಡೆದಿರುವುದು ಕಂಡು ಬಂದಿದೆ. ಕಳೆದ ವರ್ಷ 37 ಮದುವೆ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ADVERTISEMENT

ಬಾಲ್ಯ ವಿವಾಹ ತಡೆಗೆ ಕಠಿಣ ಕಾಯ್ದೆ ಜಾರಿಯಲ್ಲಿದ್ದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ವಿವಾಹಗಳಾಗುತ್ತಲೇ ಇದೆ. ಬಡತನ, ಅನಕ್ಷರತೆ, ಶೈಕ್ಷಣಿಕ ಸೌಲಭ್ಯದ ಕೊರತೆ, ಮೂಢನಂಬಿಕೆಗಳು, ಹೆತ್ತವರು, ಪಾಲಕರು ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಹಿರಿಯರ ಒತ್ತಾಸೆ ಈಡೇರಿಸಲು ಬಾಲ್ಯ ವಿವಾಹ ನಡೆಯುತ್ತಿದೆ. ಬಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಸಮಸ್ಯೆ ಹಾಗೂ ಶಿಕ್ಷಣಕ್ಕೆ ಆರ್ಥಿಕ ಸಾಮರ್ಥ್ಯವಿಲ್ಲದೆ ಮದುವೆ ಮಾಡಿ ಕಳುಹಿಸುವ ಮನಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯುತ್ತದೆ. ಬಾಲ್ಯ ವಿವಾಹ ತಡೆಗೆ ಜನ ಜಾಗೃತಿ ಮೂಡಿಸುವಕಾರ್ಯಕ್ರಮಗಳೂ ನಡೆಯುತ್ತಿವೆ. ಆದರೂ ಕದ್ದು ಮುಚ್ಚು ಅಲ್ಲಲ್ಲಿ ನಡೆಯುತ್ತಿವೆ. ತಹಶೀಲ್ದಾರರು, ಸಮಾಜ ಕಲ್ಯಾಣಅಧಿಕಾರಿಗಳು, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಮಕ್ಕಳ ರಕ್ಷಣಾಧಿಕಾರಿಗಳಾಗಿ ಕೆಲಸ ಮಾಡುತ್ತಾರೆ.

‘ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸುವ ಸಂದರ್ಭದಲ್ಲಿಯೇ ಪೋಷಕರು ವಧು–ವರರ ವಯೋಮಿತಿಯ ದಾಖಲೆಗಳನ್ನುಸಲ್ಲಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಹಾಗಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳುನಡೆಯುವುದು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಬಾಲ್ಯ ವಿವಾಹದಿಂದ ರಕ್ಷಿಸಲ್ಪಟ್ಟ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಲಾಗುವುದು’ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪ ನಿರ್ದೇಶಕ ದಿಲೀಪ್‌ ತಿಳಿಸಿದರು.

‘ಬಡತನ, ಪ್ರೇಮ ಪ್ರಕರಣ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಿನ ಜನರು ಸೇರುವುದಿಲ್ಲ ಹಾಗೂ ಅಧಿಕಾರಿಗಳುಬರುವುದಿಲ್ಲವೆಂಬ ಕಾರಣಕ್ಕೆ ಸಾಮಾನ್ಯವಾಗಿ ದೇವಾಲಯಗಳಲ್ಲಿ ಬೆಳಗಿನ ಜಾವ ಮದುವೆ ನೆರವೇರಿಸಲಾಗಿದೆ.

ಬೋವಿ ಹಾಗೂ ಕುರುಬ ಸಮುದಾಯದಲ್ಲಿ ಹೆಚ್ಚು ಬಾಲ್ಯವಿವಾಹ ನಡೆದಿದೆ. ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿಯ ಬ್ಯಾಡರಹಳ್ಳಿ ಗೊಲ್ಲರ ಹಟ್ಟಿಯವರು ದೇವಸ್ಥಾನದಲ್ಲಿ ಬಾಲ್ಯ ವಿವಾಹ ಮಾಡುತ್ತಾರೆ. ಅಧಿಕಾರಿಗಳು ಬರುವ ಮಾಹಿತಿ ಅರಿತು ಬಾಲಕಿಯ ಕತ್ತಿನಿಂದ ತಾಳಿ ಬಿಚ್ಚಿಸಿಡುತ್ತಾರೆ. ಪ್ರಕರಣ ಪತ್ತೆ ಹಚ್ಚುವುದೇ ಸವಾಲಾಗಿದೆ’ ಎಂದು ಮಕ್ಕಳ ಸಹಾಯವಾಣಿ ಸಂಯೋಜಕ ಮಲ್ಲಿಕಾರ್ಜುನ ಪುಠಾಣಿ ವಿವರಿಸಿದರು.

‘ಆರ್ಥಿಕ ಸಮಸ್ಯೆ, ಮೂಢನಂಬಿಕೆ, ಪ್ರೇಮ ಪ್ರಕರಣ ಕಾರಣಕ್ಕೆ ಹೆಚ್ಚು ಮದುವೆ ನಡೆದಿದೆ. ಲಾಕ್‌ಡೌನ್‌ ಸಡಿಲಿಕೆ ನಂತರವೂ ಬಾಲ್ಯವಿವಾಹ ನಡೆಯುತ್ತಿದೆ. ಜನಪ್ರತಿನಿಧಿಗಳ ಬೆಂಬಲ ಇದೆ ಎಂಬ ಕಾರಣಕ್ಕೆ ಮದುವೆ ಮಾಡುತ್ತಾರೆ. ಮಾಹಿತಿ ಕೊರತೆ ಕಾರಣದಿಂದ ಆಲೂರು, ಸಕಲೇಶಪುರದಲ್ಲಿ ಮದುವೆ ನಡೆಯುತ್ತಿದ್ದರೂ ಮಾಹಿತಿ ನೀಡುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ ಕಣ್ತಪ್ಪಿಸಿ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಬಾಲಕಿಯರನ್ನು ರಕ್ಷಿಸಿದ್ದೇವೆ. ಅವರು ಪೋಷಕರ ಜೊತೆಯಲ್ಲಿ ಇರುವುದಕ್ಕೆ ಒಪ್ಪದಿದ್ದಲ್ಲಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಿ ಅವರನ್ನ ಪೋಷಿಸಲಾಗುತ್ತದೆ. 18 ವರ್ಷ ತುಂಬಿದ ಬಳಿಕ ಪೋಷಕರ ಬಳಿಗೆ ಕಳುಹಿಸುತ್ತೇವೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.