ADVERTISEMENT

ಮಹಾಶಿವರಾತ್ರಿ: ಧರ್ಮಸ್ಥಳಕ್ಕೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 10:24 IST
Last Updated 7 ಫೆಬ್ರುವರಿ 2018, 10:24 IST

ಹಿರೀಸಾವೆ: ಮಹಾ ಶಿವರಾತ್ರಿ ಪ್ರಯುಕ್ತ ಸಾವಿರಾರು ಭಕ್ತರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಮೂರು ದಿನಗಳಿಂದ ಹಿರೀಸಾವೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಂಪು, ಗುಂಪಾಗಿ ಯಾತ್ರಿಗಳು ನಡೆದು ಬರುತ್ತಿದ್ದಾರೆ.

ದಿನಕ್ಕೆ 30 ರಿಂದ 50 ಕಿ.ಮೀ.ವರೆಗೆ ಕ್ರಮಿಸುವ ಹತ್ತಕ್ಕೂ ಹೆಚ್ಚು ತಂಡಗಳು ಇವೆ. ಅಯಪ್ಪ ಸ್ವಾಮಿಗೆ ಮಾಲೆ ಧರಿಸುವ ರೀತಿಯಲ್ಲಿ ಮಂಜುನಾಥನ ಮಾಲೆ ಧರಿಸಿ, ಹನ್ನೊಂದು ಆಥವಾ ಇಪ್ಪತ್ತೊಂದು ದಿನಗಳ ವ್ರತ ಆಚರಿಸಿದ್ದಾರೆ. ಫೆ. 10ರಿಂದ13ರ ವರೆಗೆ ಧರ್ಮಸ್ಥಳ ತಲುಪಿ, ಮಂಜುನಾಥಸ್ವಾಮಿಯ ದರ್ಶನ ಪಡೆಯುತ್ತಾರೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ 330 ಕಿ.ಮೀ. ದೂರವಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹಾಸನದವರೆಗೆ ಪ್ರಯಾಣಿಸುತ್ತಾರೆ. ನಂತರ ಬೆಲೂರಿನಿಂದ ಚಾರ್ಮಾಡಿ ಘಾಟ್ ಮೂಲಕ ಧರ್ಮಸ್ಥಳವನ್ನು ತಲುಪುತ್ತಾರೆ. ಮಾರ್ಗದ ಉದ್ದಕ್ಕೂ ಬೆಳಗಿನ ಸಯದಲ್ಲಿ ಕಾಫಿ, ಟೀ, ನಂತರ ಮಜ್ಜಿಗೆ, ನಿಂಬೆಹಣ್ಣಿನ ರಸ, ಎಳನೀರು ಮತ್ತು ಫಲಾಹಾರವನ್ನು ಪಾದಯಾತ್ರಿಗಳಿಗೆ ಗ್ರಾಮಸ್ಥರು ವಿತರಿಸುತ್ತಿದ್ದಾರೆ.

ADVERTISEMENT

ಮಂಗಳವಾರ ಹಿರೀಸಾವೆ ಹೋಬಳಿಯ ಬ್ಯಾಡರಹಳ್ಳಿ ಗೇಟ್‌ ಬಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಅನಿತಾಕುಮಾರಸ್ವಾಮಿ ನೇತೃತ್ವದಲ್ಲಿ ಫಲಾಹಾರ ಮತ್ತು ಮಜ್ಜಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.