ADVERTISEMENT

ಪ್ರವಾಸಿಗರಿಲ್ಲದೆ ಭಣಗುಡುತ್ತಿರುವ ಜಿನಮಂದಿರಗಳು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:43 IST
Last Updated 20 ಫೆಬ್ರುವರಿ 2018, 9:43 IST

ಹಳೇಬೀಡು: ಇತಿಹಾಸದ ಹೊಯ್ಸಳರ ಸಾಕಷ್ಟು ಮಾಹಿತಿ ಹೊಂದಿರುವ ಬಸ್ತಿಹಳ್ಳಿಯ ಜಿನಮಂದಿರಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.

ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭ ಒಂದು ತಿಂಗಳು ಮುಂಚಿತವಾಗಿಯೇ ಬಸ್ತಿಹಳ್ಳಿಯ ಜಿನಮಂದಿರಗಳ ವೀಕ್ಷಣೆಗೆ ಕರ್ನಾಟಕವಲ್ಲದೆ, ಉತ್ತರ ಭಾರತದಿಂದಲೂ ಜೈನಯಾತ್ರಿಗಳು ಬರುತ್ತಿದ್ದರು.

ಈ ಬಾರಿ ಬೆರಳೆಣಿಕೆಯಷ್ಟು ಯಾತ್ರಿಗಳು ಜಿನಮಂದಿರಗಳತ್ತ ಪಾದಬೆಳೆಸುತ್ತಿದ್ದಾರೆ. ಪ್ರಚಾರದ ಕೊರತೆ ಜತೆಗೆ ಪ್ರವಾಸಿಗರಿಗೆ ಶೌಚಾಲಯ, ಕುಡಿಯುವ ನೀರು ಇನ್ನಿತರ ಮೂಲಸೌಲಭ್ಯಗಳ ಕೊರತೆಯೂ ಇದೆ.

ADVERTISEMENT

ಇದೇ ಕಾರಣದಿಂದ ಸಾಕಷ್ಟು ಪ್ರವಾಸಿಗರು ಬಸ್ತಿಹಳ್ಳಿ ಜಿನಮಂದಿರದ ವೀಕ್ಷಣೆಗೆ ಬರಕಯ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಥಳೀಯರಾದ ಶಿವಕುಮಾರ್‌ ಅವರ ಅಭಿಪ್ರಾಯ. ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆ ಬಸದಿಯ ಐತಿಹಾಸಿಕ ಮಹತ್ವ ಕುರಿತು ಪ್ರಚಾರಕ್ಕೆ ಒತ್ತು ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಹೊಯ್ಸಳರ ದಂಡನಾಯಕ ಗಂಗರಾಜನ ಮಗ ಬೊಪ್ಪನು ವಿಜಯಿ ಪಾರ್ಶ್ವನಾಥ ಬಸದಿ ಕಟ್ಟಿಸಿದನು. ಇದೇ ಸಂದರ್ಭದಲ್ಲಿ ರಾಜ ವಿಷ್ಣುವರ್ದನ ಬಂಕಾಪುರ ಯುದ್ಧದಲ್ಲಿ ಜಯಗಳಿಸಿದ್ದರಿಂದ ಬಸದಿ ಗರ್ಭಗುಡಿಯಲ್ಲಿ ನಿರ್ಮಿಸಿದ್ದ ತೀರ್ಥಂಕರ ಮೂರ್ತಿಗೆ ವಿಜಯಿ ಪಾರ್ಶ್ವನಾಥ ಎಂದು ಕರೆಯಲಾಯಿತು.

ಬಸದಿಯ ಮುಖಮಂಟದ ಮಹಾಕವಿ ಜನ್ನ ಅನಂತನಾಥ ಪುರಾಣ ಬರೆದ ಸ್ಥಳವಾಗಿದೆ. ಹೊಯ್ಸಳ ರಾಜರು ಮಂಟಪದಲ್ಲಿ ಪ್ರಮುಖ ಸಭೆ ನಡೆಸುತ್ತಿದ್ದರು. ಮತ್ತೊಂದು ಬಸದಿಯಲ್ಲಿ ಶಾಂತಿನಾಥ ತೀರ್ಥಂಕರರ ಮೂರ್ತಿಯನ್ನು ರಾಣಿ ಶಾಂತಲೆ ಆರಾಧಿಸುತ್ತಿದ್ದರು ಎಂದು ದಾಖಲೆಗಳಿಂದ ತಿಳಿದುಬರುತ್ತದೆ.

ಶಿಲಾಶಾಸನದಲ್ಲಿ ಹೊಯ್ಸಳರ ಇತಿಹಾಸದ ಸಾಕಷ್ಟು ಮಾಹಿತಿ ಇದೆ. ಇದನ್ನು ಪುರಾತತ್ವ ಹಾಗೂ ಪ್ರವಾಸೋದ್ಯಮ ಇಲಾಖೆ ಕಡೆಗಣಿಸಿದೆ ಎನ್ನುತ್ತಾರೆ ಗ್ರಾಮ ಪಂಚಾಯತಿ ಸದಸ್ಯ ಬಿ.ಬಿ.ಭೈರೇಗೌಡ.

ಎಚ್‌.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.