ADVERTISEMENT

ಹಾಸನ: 86 ದಿನಕ್ಕೆ ಮಿನರ್ವ ಮಿಲ್‌ ಕಾರ್ಮಿಕರ ಧರಣಿ

ಸೇವೆ ಕಾಯಂ, ಗುತ್ತಿಗೆ ಪದ್ಧತಿ ರದ್ಧತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2019, 13:05 IST
Last Updated 26 ಮೇ 2019, 13:05 IST
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್‌ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಸನ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್‌ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ.   

ಹಾಸನ: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್‌ ಕಾರ್ಖಾನೆ ಕಾರ್ಮಿಕರು ನಡೆಸುತ್ತಿರುವ ಧರಣಿ ಭಾನುವಾರ 86ನೇ ದಿನಕ್ಕೆ ಕಾಲಿರಿಸಿದೆ.

ಕೇಂದ್ರ ಜವಳಿ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಕಾರ್ಖಾನೆಯಲ್ಲಿ ಒಟ್ಟು 465 ಮಂದಿ ಕಾರ್ಮಿಕರ ಪೈಕಿ 192 ಮಂದಿಯನ್ನು ಮಾತ್ರ ಕಾಯಂಗೊಳಿಸಲಾಗಿದೆ. ಉಳಿದವರನ್ನು ಕಾಯಂ ಮಾಡಿ, ಗುತ್ತಿಗೆ ಪದ್ಧತಿ ರದ್ದು ಮಾಡಬೇಕು. ಕೂಲಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

‘ಚುನಾವಣೆ ನೀತಿ ಸಂಹಿತೆ ಇತ್ಯಾದಿಯಾಗಿ ಇಲ್ಲ ಸಲ್ಲದ ಸಬೂಬು ಹೇಳಿ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಸಮಸ್ಯೆಯನ್ನು ನೂತನ ಸಂಸದರು, ಶಾಸಕರಿಗೆ ಹೇಳಿಕೊಳ್ಳುತ್ತೇವೆ. ಅಲ್ಲೂ ಸ್ಪಂದನೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಕಾರ್ಮಿಕ ಮುಖಂಡ ವಿಜಯ ಭಾಸ್ಕರ್‌ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಕಡಿಮೆ ಸಂಬಳವಾದರೂ ಬೇರೆಡೆ ಎಲ್ಲೂ ಹೋಗದೇ ಇಲ್ಲೇ ಉದ್ಯೋಗ ಮಾಡುತ್ತಿದ್ದೆವು. ಆದರೆ, ಆಡಳಿತ ಮಂಡಳಿ ದಿನಗೂಲಿ ನೌಕರರಂತೆ ನಡೆಸಿಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರಿಯಾಗಿ ಊಟ ತಿಂಡಿ ಇಲ್ಲದೆ, ಮನೆ ಬಾಡಿಗೆ ಕಟ್ಟಲಾಗದೆ, ಇದ್ದ ಪಿಂಚಣಿ ಹಣವನ್ನೂ ಪಡೆದುಕೊಂಡು ಬಹುತೇಕ ಕಾರ್ಮಿಕರು ಬರಿಗೈ ಆಗಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಡಿ.ಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಕಾರ್ಮಿಕ ಮಧು ಹೇಳಿದರು.

86 ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಸ್ಥಳದಲ್ಲೇ ಅಡುಗೆ ಮಾಡಿಕೊಂಡು, ಟೆಂಟ್‌ನಲ್ಲಿ ಮಲಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.