ADVERTISEMENT

9ರಂದು ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ವರ್ಷ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 8:10 IST
Last Updated 4 ಜುಲೈ 2013, 8:10 IST

ಹಾಸನ: ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್‌ಗಳ ಸಹಯೋಗದಲ್ಲಿ ಜುಲೈ 9ರಂದು ಹಾಸನದಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ರಾಜ್ಯ ಸಂಚಾಲಕ ಡಾ. ಎಂ.ಪಿ. ವರ್ಷ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ಈ ಮಾಹಿತಿ ನೀಡಿದ ಅವರು, `ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ತರಬೇತಿ ನಡೆಯಲಿದ್ದು ಪಿ.ಯು.ಸಿ. ಪಾಸಾದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದರು.
`ಅಹಮದಾಬಾದ್‌ನ ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ, ನವದೆಹಲಿಯ ನ್ಯಾಷನಲ್ ಮಿಷನ್ ಆಫ್ ಫುಡ್ ಪ್ರೋಸೆಸ್ಸಿಂಗ್, ಸ್ಟೇಟ್ ಮಿಷನ್ ಆಫ್ ಫುಡ್ ಪ್ರೋಸೆಸ್ಸಿಂಗ್, ರಾಜ್ಯ ಕೃಷಿ ಇಲಾಖೆಗಳು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಗೆ ಹಾಸನ ಜಿಲ್ಲೆ ಸೂಕ್ತ ಎಂದು ಪರಿಗಣಿಸಿವೆ. ಈ ಹಿನ್ನೆಲೆಯಲ್ಲಿ ಇಲ್ಲಿಯೇತರಬೇತಿ ಆರಂಭಿ ಸಲಾಗುವುದು. ಜು.9 ರಿಂದ 20ರವರೆಗೆ ವಿವಿಧ ಹಂತದಲ್ಲಿ ಬೇರೆಬೇರೆ ಕಡೆಗಳಲ್ಲಿ ತರಬೇತಿ ನಡೆಯುವುದು ಎಂದರು.

`ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ, ಆಹಾರ ಧಾನ್ಯಗಳ ಬೀಸುವಿಕೆ, ಹೈನುಗಾರಿಕೆ ಉತ್ಪನ್ನಗಳು ಮತ್ತು ಕೋಳಿ ಸಂಸ್ಕರಣೆ, ಮೊಟ್ಟೆ ಮತ್ತು ಮಾಂಸದ ಉತ್ಪನ್ನಗಳ ಕ್ಯಾನಿಂಗ್ ಮತ್ತು ಫ್ರೀಜಿಂಗ್, ಮೀನು ಸಂಸ್ಕರಣೆ, ಬ್ರೆಡ್, ಎಣ್ಣೆ ಬೀಜಗಳು ಹಾಗೂ ಇತರೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಯೋಗ್ಯ ಉದ್ದಿಮೆಗಳನ್ನು ಗುರುತಿಸುವಿಕೆ ಮತ್ತು ಆಯ್ಕೆ, ಯೋಜನಾ ವರದಿಯ ತಯಾರಿ, ಹಣಕಾಸಿನ ನೆರವು ಸಂಬಂಧಿತ ವಿಷಯಗಳು, ಉದ್ದಿಮೆ ನಿರ್ವಹಣೆ, ತಾಂತ್ರಿಕ ಮಾಹಿತಿಗಳು, ಮಾರುಕಟ್ಟೆ ನಿರ್ವಹಣೆ, ಅಗತ್ಯ ಪರವಾನಿಗೆ ಮತ್ತು ನೋಂದಣಿ, ಯಶಸ್ವಿ ಉದ್ಯಮಗಳಿಗೆ ಅವಲೋಕನಾ ಭೇಟಿ ಹಾಗೂ ತರಬೇತಿಯ ನಂತರದ ನೆರವುಗಳ ಬಗ್ಗೆ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು.

ಆಸಕ್ತರು ಜುಲೈ 6ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳ ಬಹುದು. ಹೆಚ್ಚಿನ ಮಾಹಿತಿಗೆ ದೂ. 9448988746 ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ. ಮಹಾದೇವಪ್ಪ, ಮಾರುಕಟ್ಟೆ ವ್ಯವಸ್ಥಾಪಕರಾದ ಆರ್.ಎಸ್. ಶಿವಕುಮಾರ್, ಶಿವಕುಮಾರ್ ಹಾಗೂ ಸಂಗೀತಾ ಶ್ರೀರಾಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.