ADVERTISEMENT

ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ರೇವಣ್ಣ ಪುತ್ರ ಸೇರಿ 9 ಮಂದಿ ಅವಿರೋಧ ಆಯ್ಕೆ

ಎಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಪ್ರವೇಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 2:38 IST
Last Updated 20 ಸೆಪ್ಟೆಂಬರ್ 2020, 2:38 IST
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಸೂರಜ್‌ ರೇವಣ್ಣ
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಸೂರಜ್‌ ರೇವಣ್ಣ    

ಹಾಸನ: ಪ್ರತಿಷ್ಠಿತ ಸಹಕಾರಿ ಸಂಸ್ಥೆ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಚ್‍ಡಿಸಿಸಿ ಬ್ಯಾಂಕ್)ನ ಆಡಳಿತ ಮಂಡಳಿ ನಿರ್ದೇಶಕರಾಗಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ , ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಡಾ.ಸೂರಜ್ ರೇವಣ್ಣ, ಬ್ಯಾಂಕಿನ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಕೆ.ಸತೀಶ್ ಹೊನ್ನವಳ್ಳಿ, ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್ ಸೇರಿದಂತೆ 9 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಡಾ.ಸೂರಜ್ ರೇವಣ್ಣ ಅವರ ಆಯ್ಕೆಯೊಂದಿಗೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯ ಅಖಾಡಕ್ಕೆ ಇಳಿದಂತಾಗಿದೆ. ಹೊಳೆನರಸೀಪುರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಡಾ.ಸೂರಜ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಸುಗಮವಾಯಿತು.

ದಂಡಿಗನಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಸೂರಜ್‌, ತಂದೆ ಎಚ್.ಡಿ. ರೇವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ತಾಯಿ ಭವಾನಿ ರೇವಣ್ಣ, ಸಹೋದರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆನ್ನೆಲುಬಾಗಿ ನಿಂತು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಇದೀಗ ಎಚ್ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

ಸತತ 15 ವರ್ಷದಿಂದ ಜೆಡಿಎಸ್‌ ಬೆಂಬಲಿಗರು ಎಚ್‍ಡಿಸಿಸಿ ಬ್ಯಾಂಕ್‍ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಈಗ 9 ಮಂದಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮುಂದಿನ 5 ವರ್ಷಗಳಿಗೂ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಉಳಿದ ನಾಲ್ಕು ನಿರ್ದೇಶಕ ಸ್ಥಾನಗಳಿಗೆ ಸೆ.25 ರಂದು ಚುನಾವಣೆ ನಡೆಯಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಗಿರೀಶ್ ಚನ್ನವೀರಪ್ಪ, ಮಾಜಿ ನಿರ್ದೇಶಕ ಬಿದರಿಕೆರೆ ಜಯರಾಂ ಸೇರಿದಂತೆ 8 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ನಿರ್ದೇಶಕ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೆ.17 ಕೊನೆ ದಿನವಾಗಿದ್ದು, ಸೆ.18 ರಂದು ಶುಕ್ರವಾರ
ನಾಮಪತ್ರಗಳ ಪರಿಶೀಲನೆ ನಡೆದಿತ್ತು. ಶನಿವಾರ ನಾಮತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು.

ನಾಮಪತ್ರಗಳ ವಾಪಸ್‌ ಪ್ರಕ್ರಿಯೆ ನಂತರ ಸ್ಪರ್ಧೆಯಲ್ಲಿರುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿಯಾಗಿರುವ ಹಾಸನ ಉಪವಿಭಾಗಾಧಿಕಾರಿ ಡಾ.ನವೀನ್‍ಭಟ್ ಅವರು ಪ್ರಕಟಿಸಿದ್ದು, 9 ಕ್ಷೇತ್ರಗಳಲ್ಲಿ ಒಬ್ಬೊಬ್ಬರೇ ಉಳಿದಿರುವುದರಿಂದ ಅವರೆಲ್ಲರ ಅವಿರೋಧ ಆಯ್ಕೆ ಖಚಿತವಾಗಿ ಅಧಿಕೃತವಾಗಿ ಪ್ರಕಟಿಸುವುದು ಬಾಕಿ ಉಳಿದಿದೆ.

ನಾಲ್ಕು ಕ್ಷೇತ್ರಗಳಿಗೆ ಸೆ.25 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೂ ಚುನಾವಣೆ ನಡೆಯಲಿದ್ದು, ಅಂದೇ ಮತಗಳ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.