ADVERTISEMENT

ಎಟಿಎಂನಲ್ಲಿ ಹಣ ದೋಚುತ್ತಿದ್ದವನ ಬಂಧನ

ಆರೋಪಿಯಿಂದ ₹1,80 ಲಕ್ಷ ನಗದು, ಸ್ವಿಪ್ಟ್‌ ಕಾರು ವಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:01 IST
Last Updated 14 ಅಕ್ಟೋಬರ್ 2020, 18:01 IST
ಬಂಧಿತ ಆರೋಪಿ ಆನಂದ್‌
ಬಂಧಿತ ಆರೋಪಿ ಆನಂದ್‌   

ಹಾಸನ: ಜಿಲ್ಲಾ ಸೈಬರ್‌ ಪೊಲೀಸರು ಕಾರ್ಯಾಚರಣೆ ನಡೆಸಿ, ಎಟಿಎಂಗಳಲ್ಲಿ ಹಣ ದೋಚುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ರಂಗೇನಹಳ್ಳಿ ಗ್ರಾಮದ ಆನಂದ್ ಅಲಿಯಾಸ್‌ ವಸಂತ್‌ (35) ಬಂಧಿತ ಆರೋಪಿ. ಭದ್ರತಾ ಸಿಬ್ಬಂದಿಗಳಿಲ್ಲದ ಎಂಟಿಎಂಗಳಲ್ಲಿ ಡ್ರಾ ಮಾಡಲು ಬರುತ್ತಿದ್ದ ವೃದ್ಧರು, ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದ. ಸಹಾಯ ಮಾಡುವ ನೆಪದಲ್ಲಿಅವರಿಂದ ಎಟಿಎಂ ಪಿನ್‌ ನಂಬರ್‌ ಪಡೆದು, ಹಣ ಡ್ರಾ ಮಾಡಿಕೊಟ್ಟ ಬಳಿಕ ಅವರಿಗೆ ಬೇರೆ ಬ್ಯಾಂಕ್‌ ನ ಕಾರ್ಡ್‌ ಕೊಟ್ಟು ಕಳುಹಿಸುತ್ತಿದ್ದ. ನಂತರ ಆ ಕಾರ್ಡ್‌
ಬಳಸಿ ಅವರ ಖಾತೆಯಿಂದ ಹಣ ಡ್ರಾ ಮಾಡುತ್ತಿದ್ದ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಹುಚ್ಚೇಗೌಡ ಅವರು ಸೆ. 4 ರಂದು ಹಾಸನದ ಬಿ.ಎಂ‌. ರಸ್ತೆಯ ಎಚ್‌ಡಿಸಿಸಿ ಬ್ಯಾಂಕ್‌ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದಾರೆ. ಹಣ ತೆಗೆಯಲು ‌ಪರದಾಡುತ್ತಿರುವುದನ್ನು ಗಮನಿಸಿದ ಆರೋಪಿ, ಅವರ ಎಟಿಎಂ ಕಾರ್ಡ್ ಮತ್ತು ಪಿನ್‌ ನಂಬರ್ ಪಡೆದು ₹ 7 ಸಾವಿರ ಹಣ ಡ್ರಾ ಮಾಡಿಕೊಟ್ಟಿದ್ದಾನೆ. ನಂತರಅವರಿಗೆ ಬೇರೆ ಬ್ಯಾಂಕ್‌ನಎಟಿಎಂ ಕಾರ್ಡ್ ಕೊಟ್ಟು ಕಳುಹಿಸಿದ್ದ. ಹುಚ್ಚೇಗೌಡ ಅವರು ಆ. 3 ರಂದು ಎಟಿಎಂ‌ನಲ್ಲಿ ಮತ್ತೆ ಹಣ ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣ ಇರಲಿಲ್ಲ.ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅವರ ಖಾತೆಯಿಂದ ₹ 23 ಸಾವಿರ ಹಣವನ್ನು ಆರೋಪಿ ತೆಗೆದಿದ್ದ ಎಂದು ವಿವರಿಸಿದರು.

ADVERTISEMENT

ಅ.13ರಂದು ದುದ್ದದ ಕರ್ನಾಟಕ ಬ್ಯಾಂಕ್‌ ಎಟಿಎಂ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಗಂಡಸಿ 1, ದುದ್ದ 3, ಅರಸೀಕೆರೆ 2, ತಿಪಟೂರು 1 ಹಾಗೂ ಹಾಸನ 2 ಪ್ರಕರಣಗಳಲ್ಲಿ ಅಮಾಯಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈವರೆಗೆ ₹3,93 ಲಕ್ಷ ನಗದು ಡ್ರಾ ಮಾಡಿದ್ದಾನೆ. ₹ 1,80 ಲಕ್ಷ ನಗದು, 4 ಎಟಿಎಂ‌ ಕಾರ್ಡ್ ಹಾಗೂ ಮಾರುತಿ ಸ್ವಿಫ್ಟ್ ಡಿಸೈರ‍್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ತಲೆಗೆ ಟೋಪಿ, ಹೆಲ್ಮೆಟ್‌ ಹಾಗೂ ಮುಖಕ್ಕೆ ಮಾಸ್ಕ್‌ ಧರಿಸಿ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದ. ಹಾಗಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಚಹರೆ ಸ್ಪಷ್ಟವಾಗಿರಲಿಲ್ಲ. ಭದ್ರತಾ ಸಿಬ್ಬಂದಿ ಊಟಕ್ಕೆ ಹೋಗಿದ್ದ ವೇಳೆ ಹಾಗೂ ಪಾಳಿ ಬದಲಾವಣೆ ಸಮಯದಲ್ಲಿ ಈ ಕೃತ್ಯವೆಸಗುತ್ತಿದ್ದ. ಈತ ಹುಬ್ಬಳಿಯಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆ ಮುಂದುವರಿದಿದೆ ಎಂದರು.

ಎಟಿಎಂನಲ್ಲಿ ಹಣ ಡ್ರಾ ಮಾಡಲು ಗೊತ್ತಿಲ್ಲದವರು ಸ್ನೇಹಿತರು, ಪರಿಚಯಸ್ಥರು ಹಾಗೂ ಭದ್ರತಾ ಸಿಬ್ಬಂದಿ ಸಹಾಯ ಪಡೆಯಬೇಕು. ಅಪರಿಚಿತರಿಗೆ ಕಾರ್ಡ್‌ ನೀಡಬಾರದು. ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಎಲ್ಲಾ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಎಸ್‌ಪಿ ಹೇಳಿದರು.


ಆರೋಪಿ ಪತ್ತೆಗೆ ಶ್ರಮಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌.ಎಂ. ದೇವೇಂದ್ರ, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಗಿರೀ‌ಶ್‌, ಎಚ್‌.ಸಿ. ಶ್ರೀನಾಥ್‌, ಸಿಇಎನ್‌ ಕ್ರೈಮ್‌ ಪೊಲೀಸ್‌ ಠಾಣೆಯ ಎ.ಎಸ್‌.ಐ ರಂಗಸ್ವಾಮಿ ಅವರನ್ನು ಎಸ್ಪಿ ಶ್ರೀನಿವಾಸ್‌ಗೌಡ ಅವರು ಶ್ಲಾಘಿಸಿ ಪ್ರಶಂಸನಾ ಪತ್ರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.